ನಮ್ಮ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸುವುದು ಅಂದ್ರೆ ಕೆಲವರಿಗೆ ವಿಕೃತ ಖುಷಿ. ನಾವು ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳು ರಸ್ತೆಯಲ್ಲಿ ಕಸ ಎಸೆಯುವುದು, ಪಟಾಕಿ ಸಿಡಿಸುವುದು, ಮದ್ಯ ಸೇವಿಸುವುದು ಮತ್ತು ರಸ್ತೆಯಲ್ಲಿ ಪಾರ್ಟಿ ಮಾಡುವುದನ್ನು ಕಾಣುತ್ತೇವೆ.
ಆದ್ರೆ ಇಂತಹ ನಡವಳಿಕೆಯು ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವಾಗಿ ಪರಿಣಮಿಸುತ್ತಿದೆ. ಇದರ ಜೊತೆಗೆ ಸಂಚಾರ ನಿಯಮಗಳ ಉಲ್ಲಂಘನೆಯೂ ಆಗುತ್ತೆ.
ಇತ್ತೀಚೆಗೆ ಆಗ್ರಾದ ಓಲ್ಡ್ ಮಂಡಿ ಏರಿಯಾದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜನ್ಮದಿನವನ್ನು ರಸ್ತೆಯ ಮೇಲೆ ಆಚರಿಸುವ ಮೂಲಕ ಮತ್ತು ಅಲ್ಲೇ ಪಟಾಕಿ ಸಿಡಿಸುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಈ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿಯೇ ಆತನ ಸ್ನೇಹಿತರು ಮತ್ತು ಕುಟುಂಬದವರು ಸುತ್ತುವರೆದು ಸಂಭ್ರಮಿಸಿದ್ದಾರೆ.
ಆ ವ್ಯಕ್ತಿ ಸಿಡಿಸಿದ ಪಟಾಕಿ 30 ನಿಮಿಷಗಳ ಕಾಲ ಮುಂದುವರೆದಿದ್ದು ಇದು ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.
ರಸ್ತೆ ಮಧ್ಯದಲ್ಲಿಯೇ ಬರ್ತ್‌ಡೇ ಆಚರಿಸಿದ ವ್ಯಕ್ತಿಯನ್ನು ಪ್ರದೀಪ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡದ ಸದಸ್ಯ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಸ್ತೆಯಲ್ಲಿ ಅವಾಂತರ ಸೃಷ್ಟಿಸಿದ ಘಟನೆ ಇದೊಂದೆ ಅಲ್ಲ, ರಸ್ತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿಗಳನ್ನು ಬಂಧಿಸಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿದೆ. IANS ವರದಿಯ ಪ್ರಕಾರ, ಫೆಬ್ರವರಿ 6 ರಂದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ ರಸ್ತೆಯೊಂದರಲ್ಲಿ ಆರು ಜನರ ಗುಂಪೊಂದು ನೃತ್ಯ ಮಾಡಿದ್ದಾರೆ. ಅವರು ರೈಫಲ್‌ಗಳನ್ನು ಹಿಡಿದುಕೊಂಡು ಮದ್ಯ ಸೇವಿಸುತ್ತಾ ಜೋರಾಗಿ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಕಳೆದ ವರ್ಷ ಅಕ್ಟೋಬರ್ 8 ರಂದು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಚರಿಸಿದ್ದಕ್ಕಾಗಿ ಗಾಜಿಯಾಬಾದ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸೆಪ್ಟೆಂಬರ್ 28 ರಂದು ಹಿಂಡನ್ ಎಲಿವೇಟೆಡ್ ರಸ್ತೆಯಲ್ಲಿ ಎರಡು ಹುಟ್ಟುಹಬ್ಬದ ಪಾರ್ಟಿಗಳನ್ನು ನಡೆಸಿದ್ದಕ್ಕಾಗಿ 21 ಮಂದಿಯನ್ನು ಬಂಧಿಸಲಾಗಿದೆ ಮತ್ತು ಎಂಟು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 2022 ರಲ್ಲಿ ಉತ್ತರ ಪ್ರದೇಶ ಪೊಲೀಸರು ಲಕ್ನೋದ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಯುವಕನಿಂದಲೇ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ. ಯುವಕ ರಸ್ತೆ ಸ್ವಚ್ಛಗೊಳಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕರ ಗುಂಪೊಂದು ತಮ್ಮ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ರಸ್ತೆ ಮಧ್ಯೆ ಒಟ್ಟುಗೂಡಿದ್ದರು. ಈ ಸಂದರ್ಭ ಸ್ನೇಹಿತನೊಬ್ಬ ನಡುರಸ್ತೆಯಲ್ಲಿಯೇ ಯುವಕನ ಮುಖಕ್ಕೆ ಕೇಕ್ ಬಳಿದು ಅವಾಂತರ ಸೃಷ್ಟಿಸಿದ್ದ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ನಿಯಮ ಉಲ್ಲಂಘಿಸಿದ್ದಕ್ಕೆ ಶಿಕ್ಷೆಯಾಗಿ ರಸ್ತೆ ಸ್ವಚ್ಛಗೊಳಿಸುವಂತೆ ಯುವಕ ಹಾಗೂ ಆತನ ತಂಡಕ್ಕೆ ಸೂಚಿಸಿದ್ದಾರೆ.