ಇ ಕಾಮರ್ಸ್ ದೈತ್ಯ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಜಾಹೀರಾತಿನಲ್ಲಿ ಅವರು, ಬೃಹತ್ ಮಾರಾಟ ಮೇಳದಲ್ಲಿ ಲಭ್ಯವಿರುವ ರಿಯಾಯಿತಿಗಳು ಮತ್ತು ವಿಶೇಷ ಸೌಲಭ್ಯಗಳು ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿಲ್ಲ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಜಾಹೀರಾತು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅದನ್ನು ಈಗ ಯೂಟ್ಯೂಬ್ ಖಾತೆಯಿಂದ ಅಳಿಸಿ ಹಾಕಲಾಗಿದ್ದು, ಇದರ ಮಧ್ಯೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಮಿತಾಬ್ ಬಚ್ಚನ್ ಹಾಗೂ ಇ ಕಾಮರ್ಸ್ ದೈತ್ಯ ಕಂಪನಿ flipkart ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ದೂರು ನೀಡಿದೆ.
ಮೊಬೈಲ್ ವ್ಯವಹಾರಕ್ಕೆ ಸಂಬಂಧಿಸಿದ ಈ ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ಅವರು ಹೇಳಿರುವ ಮಾತಿನಿಂದ ರಾಷ್ಟ್ರದಾದ್ಯಂತ ಇರುವ ಲಕ್ಷಾಂತರ ಚಿಲ್ಲರೆ ಮಾರಾಟಗಾರರ ಜೀವನೋಪಾಯಕ್ಕೆ ಕಂಟಕ ತಂದಿದೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೀಡಿರುವ ದೂರಿನಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಆರೋಪಿಸಿದೆ.