ಶಿವಮೊಗ್ಗ: ಬಿಬಿಎಂಪಿ ಮಾದರಿಯಲ್ಲಿ ರಾಜ್ಯದಾದ್ಯಂತ ಎಲ್ಲಾ ಆಸ್ತಿಗಳನ್ನು ಎ ಮತ್ತು ಬಿ ಖಾತಾಗಳಾಗಿ ವಿಂಗಡಿಸಿ ರಾಜ್ಯಾದ್ಯಂತ ಏಕರೀತಿಯ ಕರ ವಸೂಲಿ ಮಾಡಲು ಹೊಸ ಕಾಯ್ದೆಯನ್ನು ತಿಂಗಳೊಳಗೆ ಜಾರಿಗೊಳಿಸಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರ ವಸೂಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಏಕ ರೀತಿಯ ಕರ ವಸೂಲಾತಿಗೆ ಹೊಸ ಕಾಯ್ದೆ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ನಗರ, ಪಟ್ಟಣ ಪ್ರದೇಶಗಳಲ್ಲಿ ಇತ್ತೀಚಿನ ಕೆಲವು ದಶಕಗಳಿಂದ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಅಧಿಕೃತವಾಗಿ, ಇನ್ನು ಕೆಲವು ಕಡೆ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಿರ್ಮಾಣವಾದ ಎಲ್ಲಾ ಕಟ್ಟಡಗಳಿಗೆ ಮೂಲ ಸೌಕರ್ಯ ಒದಗಿಸುತ್ತಿದ್ದು, ಇದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಂದಾಯವಾಗಬೇಕಿದ್ದ ಭಾರಿ ಪ್ರಮಾಣದ ತೆರಿಗೆ ವಸೂಲಾಗದೆ ಬಾಕಿ ಉಳಿದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.