ಹೈದರಾಬಾದ್: ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗಲೇ ದಾರುಣ ಘಟನೆ ಸಂಭವಿಸಿದೆ. ಚಿರತೆ ದಾಳಿಗೆ 6 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ನೆಲ್ಲೂರು ಜಿಲ್ಲೆಯ ಪೋತಿರೆಡುಪದವು ಎಂಬಲ್ಲಿನ ಕುಟುಂಬ ದೇವರ ದರ್ಶನ ಪಡೆಯಲು ತಿರುಮಲಕ್ಕೆ ತೆರಳಿತ್ತು. ಶುಕ್ರವಾರ ರಾತ್ರಿ ತಿರುಪತಿ ತಲುಪಿ ಬಳಿಕ ಅಲಿಪಿರಿ ಕಾಲುದಾರಿ ಮೂಲಕ ರಾತ್ರಿ 11 ಗಂಟೆ ವೇಳೆಗೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುದ್ದ ಕುಟುಂಬದ ಮೇಲೆ ಚಿರತೆ ದಾಳಿ ನಡೆಸಿದೆ.
ಎಲ್ಲರಿಗಿಂತ ಮುಂದೆ ಸಾಗಿದ್ದ 6 ವರ್ಷದ ಬಾಲಕಿ ಲಕ್ಷಿತಾ ಮೇಲೆ ದಾಳಿ ನಡೆಸಿದ ಚಿರತೆ ಆಕೆಯನ್ನು ಕಾಡಿಗೆ ಎಳೆದೊಯ್ದು, ಬಾಲಕಿ ದೇಹದ ಅರ್ಧ ಭಾಗವನ್ನೇ ತಿಂದುಹಾಕಿದೆ.
ರಾತ್ರಿ ವೇಳೆ ಮಗುವನ್ನು ಚಿರತೆ ಎಳೆದೊಯ್ದ ಬಗ್ಗೆ ಕುಟುಂಬದವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ರಾತ್ರಿ ಶೋಧ ನಡೆಸಲು ಸಾಧ್ಯವಾಗಿಲ್ಲ. ಇಂದು ಬೆಳಿಗ್ಗೆ ಮಗುವಿನ ದೇಹ ದೇವಸ್ಥಾನದ ಸಮೀಪವೇ ಪತ್ತೆಯಾಗಿದೆ. ಮಗುವಿನ ದೇಹದ ಅರ್ಧ ಭಾಗವನ್ನೇ ಚಿರತೆ ತಿಂದಿದೆ. ಇದನ್ನು ಕಂಡು ಭಕ್ತರು ಆತಂಕಕ್ಕೀಡಾಗಿದ್ದಾರೆ.