ವಿಲುಪ್ಪುರಂ(ತಮಿಳುನಾಡು): ತಮಿಳುನಾಡಿನ ವಿಲುಪ್ಪುರಂನ ಮರಕ್ಕನಂನಲ್ಲಿ ನಕಲಿ ಮದ್ಯ ಸೇವಿಸಿದ ಮೂವರು ಸಾವನ್ನಪ್ಪಿದ್ದಾರೆ. 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮರಕ್ಕನಂನ ಎಕ್ಕಿಯಾರ್ಕುಪ್ಪಂ ಮೀನುಗಾರಿಕಾ ಕುಗ್ರಾಮದಲ್ಲಿ ಶನಿವಾರ ಸಂಜೆ ಜನರ ಗುಂಪೊಂದು ಅಕ್ರಮ ಮದ್ಯ ಸೇವಿಸಿದ ದುರಂತ ಸಂಭವಿಸಿದೆ. ದುರಂತದಲ್ಲಿ ಮೃತಪಟ್ಟವರನ್ನು ಶಂಕರ್ (50), ದರಣಿವೇಲ್ (50) ಮತ್ತು ಸುರೇಶ್ (60) ಎಂದು ಗುರುತಿಸಲಾಗಿದೆ.
ಅವರು ಮತ್ತು ಮದ್ಯ ಸೇವಿಸಿದ ಇತರರು ದೈಹಿಕ ಅಸ್ವಸ್ಥತೆಯನ್ನು ಅನುಭವಿಸಿದ ನಂತರ ಪುದುಚೇರಿಯ ಜಿಪ್ಮರ್ ಆಸ್ಪತ್ರೆಗೆ ಸಾಗಿಸಲಾಯಿತು. ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು.
ಘಟನೆಗೆ ಸಂಬಂಧಿಸಿದಂತೆ ಮರಕ್ಕನಂ ಇನ್ಸ್ ಪೆಕ್ಟರ್ ಅರುಳ್ ವಡಿವೇಲ್ ಅಳಗನ್, ಸಬ್ ಇನ್‌ಸ್ಪೆಕ್ಟರ್ ದೀಪನ್, ಪಿಯು ಇನ್ಸ್ ಪೆಕ್ಟರ್ ಮರಿಯಾ ಸೋಬಿ ಮಂಜುಳಾ ಮತ್ತು ಸಬ್ ಇನ್‌ಸ್ಪೆಕ್ಟರ್ ಶಿವಗುರುನಾಥನ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.