ಕೊರೊನಾ ನಂತ್ರದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೊರೊನಾ ನಂತ್ರ ಲಾಕ್ ಡೌನ್, ವರ್ಕ್ ಫ್ರಂ ಹೋಮ್ ನಿಂದಾಗಿ ಜನರು ಹೊರ ಬರುತ್ತಿದ್ದಾರೆ.
ಆರ್ಥಿಕ ಪರಿಸ್ಥಿತಿಯಲ್ಲೂ ಏರುಪೇರಾಗಿದ್ದು, ಅನೇಕರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಖಿನ್ನತೆ, ಒತ್ತಡ, ನಕಾರಾತ್ಮಕ ಆಲೋಚನೆಗಳು ಜನರ ಜೀವನದ ಒಂದು ಭಾಗವಾಗಿದೆ. ಇದ್ರಿಂದ ಹೊರಬರಬೇಕೆಂದ್ರೆ ಮೊದಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಾಗಬೇಕು.
ಸದಾ ಸಂತೋಷವಾಗಿರಲು ಪ್ರಯತ್ನಿಸಬೇಕು. ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಆಲೋಚನೆ ಮಾಡುವುದನ್ನು ಬಿಟ್ಟು ನಗುತ್ತ ಸ್ವೀಕರಿಸಬೇಕು. ನಗು ಡೋಪಮೈನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ನಮಗೆ ಸಂತೋಷವನ್ನು ನೀಡುತ್ತದೆ. ಸದಾ ಕೃತಕ ನಗು ಮುಖದಲ್ಲಿ ಇರಬೇಕೆಂದಿಲ್ಲ. ಧನಾತ್ಮಕ ಆಲೋಚನೆ ಮಾಡುತ್ತಿದ್ದರೆ ಮುಖದ ಮೇಲೆ ನಗು ತಾನಾಗಿಯೇ ಬರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ಮುಂದೆ ನಿಂತು ಮುಗುಳು ನಗೆ ನಕ್ಕು ದಿನ ಪ್ರಾರಂಭಿಸಿ.
ವ್ಯಾಯಾಮ ಫಿಟ್ನೆಸ್ ಗೆ ಮಾತ್ರವಲ್ಲ ಸಂತೋಷ ಹೆಚ್ಚಿಸಲು ಸಹಕಾರಿ. ಒತ್ತಡ, ಖಿನ್ನತೆ ಭಾವನೆಯನ್ನು ಇದು ಕಡಿಮೆ ಮಾಡುತ್ತದೆ.
ನಕಾರಾತ್ಮಕ ಚಿಂತನೆ ಭಯಕ್ಕೆ ಕಾರಣವಾಗುತ್ತದೆ. ಒತ್ತಡವನ್ನು ಹೆಚ್ಚು ಮಾಡುತ್ತದೆ. ಅನಾರೋಗ್ಯಕ್ಕೂ ಇದು ಕಾರಣವಾಗುತ್ತದೆ. ಹಾಗಾಗಿ ನಕಾರಾತ್ಮಕ ಚಿಂತೆ ಬಿಡಬೇಕು. ಸಕಾರಾತ್ಮಕ ಆಲೋಚನೆ ಮಾಡಬೇಕು. ನಕಾರಾತ್ಮಕ ಚಿಂತನೆ ಮಾಡುವ ಜನರಿಂದ ದೂರವಿರುವುದು ಒಳ್ಳೆಯದು. ಅವರ ಮಾತು ನಿಮ್ಮನ್ನು ಮತ್ತಷ್ಟು ಹತಾಶೆ, ಭಯಕ್ಕೆ ತಳ್ಳುತ್ತದೆ.
ಒತ್ತಡ, ಹತಾಶೆ ಭಾವ ಮೂಡುತ್ತಿದ್ದಂತೆ ಶಾಂತವಾಗಿ. ದೀರ್ಘವಾದ ಉಸಿರು ತೆಗೆದುಕೊಳ್ಳಿ. ಕಣ್ಣು ಮುಚ್ಚಿ ಹಳೆಯ ಸುಂದರ ಘಟನೆಗಳನ್ನು ನೆನಪಿಸಿಕೊಳ್ಳಿ. ಸುಂದರ ಸ್ಥಳವನ್ನು ಕೂಡ ಕಲ್ಪಿಸಿಕೊಳ್ಳಬಹುದು. ಉಸಿರನ್ನು ಬಿಗಿ ಹಿಡಿದು ಐದರವರೆಗೆ ಎಣಿಸಿ. ಆಗ ಮನಸ್ಸು ತಹಬದಿಗೆ ಬರುತ್ತದೆ.
ಒತ್ತಡ ಎಲ್ಲರಿಗೂ ಸಾಮಾನ್ಯ. ನಿಮಗಿಂತ ಹೆಚ್ಚು ಸಮಸ್ಯೆಯುಳ್ಳ ಜನರು ಜಗತ್ತಿನಲ್ಲಿದ್ದಾರೆ. ಹಾಗಾಗಿ ನಿಮ್ಮ ಸಮಸ್ಯೆ ದೊಡ್ಡದಲ್ಲ. ಸಮಸ್ಯೆ ಬಗ್ಗೆ ಸದಾ ಆಲೋಚನೆ ಮಾಡುವ ಬದಲು ಅದರಿಂದ ಹೊರ ಬರುವುದು ಹೇಗೆ ಎಂಬುದನ್ನು ನೋಡಿ. ಸಮಸ್ಯೆಯನ್ನು ಎದುರಿಸಿ ಎದ್ದು ನಿಲ್ಲಿ.