ಜನಸಾಮಾನ್ಯರ ಬಗ್ಗೆ ಟ್ವೀಟ್‌ಗಳ ಮೂಲಕ ಭಾರೀ ಕಾಳಜಿ ತೋರುವ ಉದ್ಯಮಿ ಆನಂದ್ ಮಹಿಂದ್ರಾ ಈ ಬಾರಿ ಕರ್ನಾಟಕದ ಬಸ್ ನಿಲ್ದಾಣದಲ್ಲಿದ್ದ ಮಹಿಳೆಯೊಬ್ಬರ ಬಗ್ಗೆ ಬರೆದಿದ್ದಾರೆ.
ಅಂಕೋಲಾ ಬಸ್ ನಿಲ್ದಾಣದಲ್ಲಿ ಹಣ್ಣುಗಳನ್ನು ಮಾರಾಟ ಮಾಡುವ ಮಹಿಳೆಯೊಬ್ಬರು, ತನ್ನ ಗ್ರಾಹಕರು ಹಣ್ಣು ತಿಂದು ಎಸೆದ ಸಿಪ್ಪೆಯ ಕಸವನ್ನು ಸ್ವಚ್ಛಗೊಳಿಸುವ ಹೊಣೆಗಾರಿಕೆಯನ್ನೂ ತಾನೇ ನಿಭಾಯಿಸುತ್ತಿರುವ ವಿಚಾರವನ್ನು ಮಹಿಂದ್ರಾ ತಿಳಿಸಿದ್ದಾರೆ. ಆದರ್ಶ ಹೆಗಡೆ ಹೆಸರಿನ ವ್ಯಕ್ತಿಯೊಬ್ಬರು ಮಾಡಿದ್ದ ಟ್ವೀಟ್‌ಅನ್ನು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
“ಭಾರತವನ್ನು ಸ್ವಚ್ಛಗೊಳಿಸುತ್ತಿರುವ ನಿಜವಾದ, ಸೈಲೆಂಟ್ ಹೀರೋಗಳು ಇವರು. ಆಕೆಯ ಪರಿಶ್ರಮಗಳು ಸಾರ್ವಜನಿಕ ಗಮನಕ್ಕೆ ಬಾರದೇ ಹೋಗುವುದು ನನಗೆ ಇಷ್ಟವಿಲ್ಲ, ಹೀಗಾಗಿ ಆಕೆಯ ಬಗ್ಗೆ ತಿಳಿದುಕೊಳ್ಳಲು ನಿಜಕ್ಕೂ ಇಷ್ಟ ಪಡುತ್ತೇನೆ. ನಾವು ಇದನ್ನು ಮಾಡುವುದು ಹೇಗೆಂದು ಸಲಹೆ ನೀಡುತ್ತೀರಾ ? ಆದರ್ಶ ಹೆಗಡೆಯವರೇ ನಿಮಗೆ ಆಕೆಯ ಬಗ್ಗೆ ತಿಳಿದಿರುವ ಪ್ರದೇಶದಲ್ಲಿರುವ ಯಾರಾದರೂ ಇದ್ದಲ್ಲಿ ನನಗೆ ತಿಳಿಸುವಿರಾ ?” ಎಂದು ಕೇಳಿ ರೀಟ್ವೀಟ್ ಮಾಡಿದ್ದಾರೆ ಮಹಿಂದ್ರಾ.
“ಉಳ್ಳವರು ಹಾಗೂ ಸಿರಿವಂತರಿಗಿಂತಲೂ ಸಾಮಾಜಿಕ ಹೊಣೆಗಾರಿಕೆಯ ಭಾರವನ್ನು ನಿಭಾಯಿಸುತ್ತಿರುವುದು ದುರ್ಬಲ ಹಾಗೂ ಬಡ ವರ್ಗದವರು,” ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.