ಅಂಗಡಿ ಮಾಲೀಕರೊಬ್ಬರಿಗೆ ವ್ಯವಹಾರದಲ್ಲಿ ನೆರವಾಗುತ್ತಿರುವ ಮೊಲವೊಂದು ತನ್ನ ಮುದ್ದುತನದಿಂದ ನೆಟ್ಟಿಗರ ಮನಗೆಲ್ಲುತ್ತಿದೆ.
ಅಂಗಡಿಯ ಮುಂದಿನ ಕೌಂಟರ್‌ನಲ್ಲಿ ಕುಳಿತಿರುವ ಈ ಮುದ್ದು ಮೊಲದ ಬಳಿ ತಮ್ಮ ಕೈಯನ್ನು ಇರಿಸಲು ಗ್ರಾಹಕರಿಗೆ ಅಂಗಡಿಯ ಯಜಮಾನಿ ಕೇಳುತ್ತಾರೆ. ನಂತರ ಮೊಲ ಏನು ಮಾಡುತ್ತದೆ ಎಂದು ನೋಡುವುದೇ ಒಂದು ಚಂದ.
ಚಿಲ್ಲರೆ ಹಣ ಹಿಂದಿರುಗಿಸುವ ವೇಳೆ ನೋಟೊಂದನ್ನು ಮೊಲಕ್ಕೆ ಕೊಡುತ್ತಾರೆ ಯಜಮಾನಿ. ಬಳಿಕ ಆ ಮೊಲವು ನೋಟನ್ನು ಗ್ರಾಹಕರಿಗೆ ಕೊಡುತ್ತದೆ. ಬರೀ ನೋಟುಗಳು ಮಾತ್ರವಲ್ಲದೇ ನಾಣ್ಯಗಳು, ರಸೀದಿ ಹಾಗೂ ವಸ್ತುಗಳನ್ನೂ ಸಹ ಗಿರಾಕಿಗಳಿಗೆ ಕೊಡುತ್ತಿದೆ ಈ ಮೊಲ.
ಸಿಸಿಟಿವಿ ಇಡಿಯಟ್ಸ್ ಹೆಸರಿನ ಟ್ವಿಟರ್ ಪೇಜ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ’ಸಹಾಯಕ ಅಂಗಡಿ ಮಾಲೀಕ’ ಎಂದು ಕ್ಯಾಪ್ಷನ್ ನೀಡಲಾಗಿದೆ.