ಹಸಿರಿನಿಂದ ಕಂಗೊಳಿಸುವ ಪೈನ್ ಮರ ಕ್ರಿಸ್ ಮಸ್ ಮರವೆಂದೇ ಚಿರಪರಿಚಿತ. ಕ್ರಿಶ್ಚಿಯನ್ರ ದೊಡ್ಡ ಹಬ್ಬವಾದ ಕ್ರಿಸ್ಮಸ್ ಈ ಮರವಿಲ್ಲದೇ ನಡೆಯೋಕೆ ಸಾಧ್ಯವೇ ಇಲ್ಲ. ಡಿಸೆಂಬರ್ ತಿಂಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರತಿಯೊಂದು ಮನೆಯಲ್ಲೂ ಈ ಮರ ಅಲಂಕಾರಗೊಂಡಿರುತ್ತೆ.
ಈ ಕ್ರಿಸ್ಮಸ್ ಗಿಡಕ್ಕೆ ಆಟಿಕೆ ಸಾಮಗ್ರಿ, ಅಲಂಕಾರಿಕ ವಸ್ತು ಹಾಗೂ ದೀಪಾಲಂಕಾರವನ್ನ ಮಾಡುವ ರೂಢಿ ಬಹಳ ವರ್ಷಗಳಿಂದ ನಡೆದುಕೊಂಡು ಬರ್ತಿದೆ. ಕ್ರಿಶ್ಚಿಯನ್ ಸಮುದಾಯದ ಇತಿಹಾಸವನ್ನ ಕೆದಕುತ್ತಾ ಹೋದರೆ ಈ ಕ್ರಿಸ್ಮಸ್ ಗಿಡಕ್ಕೆ ಅಲಂಕಾರ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬರ್ತಿತ್ತು ಎಂಬ ವಿಚಾರ ತಿಳಿದು ಬರುತ್ತೆ.
ಈಗ ಪೈನ್ ಗಿಡ ಸಿಗಲಿಲ್ಲ ಅಂದರೆ ಕೃತಕ ಕ್ರಿಸ್ಮಸ್ ಗಿಡಕ್ಕಾದರೂ ಅಲಂಕಾರವನ್ನ ಮಾಡಲಾಗುತ್ತೆ. ಆದರೆ ಈ ರೀತಿ ಕ್ರಿಸ್ಮಸ್ ಗಿಡಗಳನ್ನ ಮೊದಲು ಅಲಂಕಾರ ಮಾಡಲು ಶುರು ಮಾಡಿದ್ದು 16ನೇ ಶತಮಾನದ ಆರಂಭದಲ್ಲಂತೆ.
ಆಧುನಿಕ ಜಮರ್ನಿಯ ನವೋದಯದ ಸಂದರ್ಭದಲ್ಲಿ ಈ ಪದ್ಧತಿ ಆರಂಭವಾಯ್ತು ಅಂತಾ ಇತಿಹಾಸ ಹೇಳುತ್ತೆ. ಅಲಂಕರಿಸಿದ ಮರಗಳನ್ನ ಮರದ ಪಿರಮಿಡ್ಗಳ ಮೇಲೆ ನಿಲ್ಲಿಸಿ ಮೇಣದ ಬತ್ತಿಯನ್ನ ಹಚ್ಚಿ ಅಲಂಕಾರ ಮಾಡುತ್ತಿದ್ದರಂತೆ. ಅಂದಿನಿಂದ ಕ್ರಿಶ್ಚಿಯನ್ನರು ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ಮರವನ್ನ ಅಲಂಕಾರ ಮಾಡಲು ಶುರು ಮಾಡಿದರು ಎನ್ನಲಾಗುತ್ತೆ.
ಇತಿಹಾಸಕಾರರು ಹೇಳುವಂತೆ 16ನೇ ಶತಮಾನದ ಪ್ರೊಟೆಸ್ಟಂಟ್ ಸುಧಾರಕ ಮಾರ್ಟಿನ್ ಲೂಥರ್ ಮೊದಲು ಮರಕ್ಕೆ ಮೇಣದ ಬತ್ತಿ ಬೆಳಗಿದವರು. ಆದರೆ 1576ರಿಂದಲೇ ಕ್ರಿಸ್ಮಸ್ ವೃಕ್ಷ ಪ್ರಾತಿನಿಧ್ಯದಲ್ಲಿತ್ತು ಅನ್ನೋದಕ್ಕೆ ಅಲ್ಸೇನ್ನ ಟರ್ಕ್ಹೈಮ್ನಲ್ಲಿ ಸಾಕ್ಷ್ಯಗಳಿವೆ.