ಕಾಲಿನ ಗಂಟುಗಳ ನೋವು 40ರ ನಂತರ ಸಾಮಾನ್ಯವಾದರೂ ಈಗ ಎಳೆ ಪ್ರಾಯದವರಲ್ಲೂ ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡುವುದು ಮತ್ತು ಕಡಿಮೆ ಓಡಾಟ ಇದಕ್ಕೊಂದು ಕಾರಣವಿರಬಹುದು. ಅದನ್ನು ಬರದಂತೆ ತಡೆಯಲು ಹೀಗೆ ಮಾಡಬಹುದು.
ನೀವು ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡುವವರಾದರೆ ನಿತ್ಯ ವ್ಯಾಯಾಮ ಮಾಡಲು ಮರೆಯದಿರಿ. ದಿನಕ್ಕೆ ಕನಿಷ್ಠ 20 ನಿಮಿಷವನ್ನು ವಾಕಿಂಗ್ ಅಥವಾ ವ್ಯಾಯಾಮಕ್ಕೆ ಮೀಸಲಿಡಿ. ಇಲ್ಲವಾದರೆ ವಯಸ್ಸಾದಂತೆ ಮಂಡಿನೋವು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ.
ಕೀಲು ನೋವು ಇದೆ ಎಂಬ ಕಾರಣಕ್ಕೆ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಡಿ. ಸುಲಭವಾಗಿ ಮಾಡಬಹುದಾದ ವ್ಯಾಯಾಮಗಳನ್ನು ನಿರಂತರ ಮುಂದುವರಿಸಿ. ಬೇಕಿದ್ದರೆ ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ.
ದೇಹ ತೂಕ ಹೆಚ್ಚಿದರೂ ಮಂಡಿ ನೋವು ಕಾಣಿಸಿಕೊಳ್ಳಬಹುದು. ಹಾಗಾಗಿ ದೇಹ ತೂಕ ಇಳಿಸುವತ್ತ ಮೊದಲು ಗಮನ ಕೊಡಿ. ಆರೋಗ್ಯಕರ ಆಹಾರ ಸೇವಿಸಿ. ಜಂಕ್ ಫುಡ್ ನಿಂದ ದೂರವಿರಿ.
ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೊಂದಿರುವ ಆಹಾರ ಪದಾರ್ಥ ಸೇವಿಸಿ. ನಲ್ವತ್ತರ ಬಳಿಕ ಕ್ಯಾಲ್ಸಿಯಂ ಟೆಸ್ಟ್ ಮಾಡುವುದನ್ನು ಮರೆಯದಿರಿ. ಸಾಕಷ್ಟು ಪ್ರಮಾಣದ ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದಲೂ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.