ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರೆದಿದೆ. ಇದನ್ನು ವಿರೋಧಿಸಿ ಹೌತಿ ಬಂಡುಕೋರರು ಮತ್ತೊಮ್ಮೆ ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಎರಡು ಹಡಗುಗಳನ್ನು ಟಾರ್ಗೆಟ್ ಮಾಡಿದ್ದಾರೆ. ಏಡನ್ ಕೊಲ್ಲಿಯಲ್ಲಿ ಬಂಡುಕೋರರು ಡ್ರೋನ್ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ ಈ ದಾಳಿಯ ಹಿಂದೆ ತಮ್ಮದೇ ಕೈವಾಡ ಇರುವುದಾಗಿ ಹೌತಿಗಳು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ದಾಳಿ ತಡೆಯಲು ಅಮೆರಿಕ, ಇಸ್ರೇಲ್ ವಿಫಲ!
ಇರಾನ್ ಬೆಂಬಲಿತ ಹೌತಿಗಳು ನವೆಂಬರ್‌ನಲ್ಲಿ ದಾಳಿ ಪ್ರಾರಂಭಿಸಿದರು. ಅಮೆರಿ ಜನವರಿಯಲ್ಲಿ ವೈಮಾನಿಕ ದಾಳಿಯ ಅಭಿಯಾನವನ್ನು ಪ್ರಾರಂಭಿಸಿತು. ಆದಾಗ್ಯೂ ಬಂಡುಕೋರನ್ನು ತಡೆಯಲು ಅಮೆರಿಕ ಮತ್ತು ಇಸ್ರೇಲ್‌ಗೆ ಇದುವರೆಗೆ ಸಾಧ್ಯವಾಗಿಲ್ಲ.
ಹಮಾಸ್ ಬೆಂಬಲಕ್ಕೆ ಹೌತಿ ದಾಳಿ
ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾದ ನಂತರ, ಯೆಮೆನ್‌ನ ಹೌತಿ ಬಂಡುಕೋರರು ಏಡನ್ ಕೊಲ್ಲಿಯಲ್ಲಿ ಹಾದುಹೋಗುವ ಹಡಗುಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಅಂದಿನಿಂದ ಹೌತಿ ಬಂಡುಕೋರರು ಹಲವು ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ಮತ್ತು ಬ್ರಿಟನ್ ಹೌತಿ ಬಂಡುಕೋರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತು. ಈ ದಾಳಿಗಳಿಂದಾಗಿ ಅನೇಕ ವ್ಯಾಪಾರ ಸಂಸ್ಥೆಗಳು ತಮ್ಮ ಹಡಗುಗಳನ್ನು ಅಂತರರಾಷ್ಟ್ರೀಯ ಮಾರ್ಗಗಳ ಬದಲಿಗೆ ದಕ್ಷಿಣ ಆಫ್ರಿಕಾಕ್ಕೆ ದೀರ್ಘ ಮಾರ್ಗದ ಮೂಲಕ ಕಳುಹಿಸಲು ಪ್ರಾರಂಭಿಸಿವೆ. ಇದರಿಂದಾಗಿ ವಿಶ್ವದಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.
ಹೌತಿಗಳಿಂದ ಅರಬ್ ಪ್ರದೇಶದಲ್ಲಿ ಉದ್ವಿಗ್ನತೆ
ಹೌತಿ ಬಂಡುಕೋರರ ದಾಳಿಯಿಂದಾಗಿ ಇಸ್ರೇಲ್-ಹಮಾಸ್ ಯುದ್ಧವು ಇಡೀ ಅರಬ್ ಪ್ರದೇಶಕ್ಕೆ ಹರಡುವ ಅಪಾಯವನ್ನು ಹೆಚ್ಚಿಸಿದೆ. ಅಮೇರಿಕಾ ತನ್ನ ಮಿತ್ರರಾಷ್ಟ್ರಗಳ ಜೊತೆಗೆ ಅಂತರಾಷ್ಟ್ರೀಯ ಹಡಗು ಮಾರ್ಗಗಳ ಭದ್ರತೆಗಾಗಿ ಕಣ್ಗಾವಲು ಹೆಚ್ಚಿಸಿದೆ. ಆದರೆ ಹೌತಿ ಬಂಡುಕೋರರು ಅಮೆರಿಕದ ಯುದ್ಧನೌಕೆಗಳನ್ನೂ ಗುರಿಯಾಗಿಸಿಕೊಂಡಿದ್ದಾರೆ. ಹೌತಿ ಬಂಡುಕೋರರ ಈ ದಾಳಿಯ ಪ್ರಮುಖ ಉದ್ದೇಶ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವುದು. ಇರಾನ್ ಜೊತೆಗೆ ಇವರು ಮಿತೃತ್ವ ಬಯಸುತ್ತಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಅಮೆರಿಕ ಪ್ರಾಸ್ಪರಿಟಿ ಗಾರ್ಡಿಯನ್ ಎಂಬ ಹೆಸರಿನ ಬಹುಪಕ್ಷೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿನ ಭದ್ರತಾ ಸವಾಲುಗಳನ್ನು ಜಂಟಿಯಾಗಿ ಎದುರಿಸುವುದು ಇದರ ಉದ್ದೇಶ. ಅಮೆರಿಕ, ಯುಕೆ ಸೇರಿದಂತೆ ಹತ್ತಾರು ದೇಶಗಳು ಒಗ್ಗೂಡಿ ಹೌತಿ ಬಂಡುಕೋರರಿಗೆ ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದವು. ಅಷ್ಟೇ ಅಲ್ಲ ಹೌತಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ನೇತೃತ್ವದಲ್ಲಿ ಹನ್ನೆರಡು ದೇಶಗಳು ದಾಳಿ ಮಾಡಿದ್ದವು. ಆದರೂ ಈ ಸಂಘಟನೆಯನ್ನು ಮಟ್ಟಹಾಕಲು ಸಾಧ್ಯವಾಗಿಲ್ಲ.
ಹೌತಿ ಬಂಡುಕೋರರು ಯಾರು?
2014ರಲ್ಲಿ ಯೆಮನ್‌ನಲ್ಲಿ ಶಿಯಾ-ಸುನ್ನಿ ವಿವಾದ ನಡೆಯುತ್ತಿತ್ತು. ಅಧಿಕಾರ ಬದಲಾವಣೆಗಳ ನಡುವೆ ದೇಶದಲ್ಲಿ ಅಸ್ಥಿರತೆ ಉಂಟಾಗಿತ್ತು. ಅದೇ ಸಮಯದಲ್ಲಿ ಸೈನ್ಯವು ವಿಭಜನೆಯಾಯಿತು ಮತ್ತು ಪ್ರತ್ಯೇಕತಾವಾದಿ ಹೌತಿಗಳು ದಕ್ಷಿಣದಲ್ಲಿ ಸಜ್ಜುಗೊಂಡರು.
ಅರಬ್ ದೇಶಗಳಲ್ಲಿ ನಡೆಯುತ್ತಿದ್ದ ಈ ಸಂಘರ್ಷದಲ್ಲಿ ಇರಾನ್ ಮತ್ತು ಸೌದಿ ಕೂಡ ಧುಮುಕಿದವು. ಹೌತಿ ಬಂಡುಕೋರರಿಗೆ ಶಿಯಾ ಪ್ರಾಬಲ್ಯವಿರುವ ಇರಾನ್‌ನಿಂದ ಬೆಂಬಲ ಸಿಕ್ಕಿತು. ಆದ್ದರಿಂದ ಸುನ್ನಿ ಬಹುಸಂಖ್ಯಾತ ದೇಶ ಸೌದಿ ಅರೇಬಿಯಾ ಸರ್ಕಾರ. ಬಳಿಕ ದೇಶದ ಹೆಚ್ಚಿನ ಭಾಗವನ್ನು ಬಂಡುಕೋರರು ವಶಪಡಿಸಿಕೊಂಡರು. 2015 ರಲ್ಲಿ ಬಂಡುಕೋರರು ಇಡೀ ಸರ್ಕಾರವನ್ನು ಗಡಿಪಾರು ಮಾಡಲು ಒತ್ತಾಯಿಸಿದರು. ಹೀಗೆ ಶುರುವಾದ ಹೌತಿಗಳ ಅಟ್ಟಹಾರ ಮುಂದುವರಿದಿದೆ.