ತಿರುವನಂತಪುರಂ: ದೇವಸ್ಥಾನದ ಗೋಡೆ ಬಳಿ ಮೂತ್ರ ವಿಸರ್ಜನೆ ಮಾಡಿದ ಯುವಕನನ್ನು ಬಾಲಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಕಾರು ಹತ್ತಿಸಿ ಹತ್ಯೆಗೈದ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿದೆ.
10ನೇ ತರಗತಿ ವಿದ್ಯಾರ್ಥಿ ಅಪಘಾತದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ ಸಂಬಂಧಿಕ ಬಾಲಕನನ್ನೇ ಯುವಕ ಕಾರು ಹತ್ತಿಸಿ ಸೇಡು ತೀರಿಸಿಕೊಂಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಆರೋಪಿಯನ್ನು ಪ್ರಿಯರಂಜನ್ ಎಂದು ಗುರುತಿಸಲಾಗಿದ್ದು, ದುಬೈನಲ್ಲಿ ಟ್ಯಾಟೂ ಸೆಂಟರ್ ನಡೆಸುತ್ತಿದ್ದಾನೆ. ಮೃತ ಬಾಲಕ 10ನೇ ತರಗತಿಯ ಆದಿ ಶೇಖರ್ (15) ಎಂದು ತಿಳಿದುಬಂದಿದೆ. ಬಾಲಕ ಹಾಗೂ ಆರೋಪಿ ಪ್ರಿಯರಂಜನ್ ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದಾರೆ.
ದೇವಸ್ಥಾನದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಯುವಕನನ್ನು ಬಾಲಕ ಆದಿ ಶೇಖರ್ ಪ್ರಶ್ನಿಸಿದ್ದ. ಇದೇ ಕಾರಣಕ್ಕೆ ಬಾಲಕನ ಮೇಲೆ ಚಾಲಕ ಸೇಡು ತೀರಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆದಿ ಶೇಖರ್ ಪೂವಾಚಲ ಪುಳಿಂಗೋಡುವಿನ ಅರುಣೋದಯ ಮತ್ತು ಶೀಬಾ ದಂಪತಿಯ ಪುತ್ರ. ಆ.30ರಂದು ಸಂಜೆ 5:30ರ ಸುಮಾರಿಗೆ ಪುಳಿಂಗೋಡು ಭದ್ರಕಾಳಿ ದೇವಸ್ಥಾನದ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಮುಂಭಾಗದಲ್ಲಿ ಸೈಕಲ್ ತುಳಿಯುತ್ತಿದ್ದ ಬಾಲಕನಿಗೆ ಪ್ರಿಯರಂಜನ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಆಕಸ್ಮಿಕ ಅಪಘಾತದಲ್ಲಿ ಬಾಲಕ ಸಾವು ಎಂದು ಭಾವಿಸಲಾಗಿತ್ತು. ಆದರೆ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅನುಮಾನ ವ್ಯಕ್ತವಾಗಿದೆ.
ಆರೋಪಿ ಪ್ರಿಯರಂಜನ್ ದೇವಸ್ಥಾನದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಗಮನಿಸಿದ ಆದಿ ಶೇಖರ್ ಇದನ್ನು ವಿರೋಧಿಸಿದ್ದಾನೆ. ಇಬ್ಬರ ನಡುವೆ ಕೆಲ ಕಾಲ ಜಗಳ ನಡೆದಿದೆ ಎನ್ನಲಾಗಿದೆ. ಇದೇ ಸೇಡಿಗೆ ಪ್ರಿಯರಂಜನ್ ಬಾಲಕನ ಮೇಲೆ ಕಾಲು ಹತ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ನಡುವೆ ಪ್ರಕರಣದ ಆರೋಪಿ ಪ್ರಿಯರಂಜನ್ ತಲೆಮರೆಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.