ದೀಪಾವಳಿ, ಸಂತೋಷ ಮತ್ತು ಬೆಳಕಿನ ಹಬ್ಬವಾಗಿದೆ. ಈ ಹಬ್ಬದಲ್ಲಿ ದೇಶದ ವಿವಿಧೆಡೆ ಬೇರೆ ಬೇರೆ ತೆರನಾದ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ದೀಪಾವಳಿಯಲ್ಲಿ ಎಣ್ಣೆ, ತುಪ್ಪ, ಹಾಲು ಹೀಗೆ ಎಲ್ಲವನ್ನೂ ಬಳಸುತ್ತೇವೆ. ದಕ್ಷಿಣ ಭಾರತದಲ್ಲಿ ದೀಪಾವಳಿ ಆಚರಣೆ ಬಹಳ ವಿಭಿನ್ನವಾಗಿರುತ್ತದೆ. ಕೇರಳ ಮತ್ತು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಜನರು ಬೆಳಗ್ಗೆ ಬೇಗ ಎದ್ದು ದೀಪಾವಳಿಯ ದಿನ ಎಣ್ಣೆ ಸ್ನಾನ ಮಾಡುತ್ತಾರೆ. ಹೆಚ್ಚಿನ ಜನರು ಎಣ್ಣೆಯಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುವುದು ವಿಶೇಷ. ಇದು ಸಂಪ್ರದಾಯ ಮಾತ್ರವಲ್ಲ, ಆರೋಗ್ಯಕ್ಕೂ ಸಂಬಂಧಿಸಿದ ಆಚರಣೆ.
ದೀಪಾವಳಿಯಂದು ಎಣ್ಣೆ ಸ್ನಾನದ ಪ್ರಯೋಜನಗಳು
ಎಳ್ಳೆಣ್ಣೆ ಸ್ನಾನ ಮಾಡುವ ಸಂಪ್ರದಾಯ ಪ್ರಾರಂಭವಾದಾಗ ಚಳಿಗಾಲವಿತ್ತು. ಎಳ್ಳೆಣ್ಣೆ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ ಮತ್ತು ರೋಗನಿರೋಧಕ ಶಕ್ತಿಯೂ ಜಾಸ್ತಿಯಾಗುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನಿಂದ ದೂರವಿರಲು ಎಳ್ಳೆಣ್ಣೆ ಸ್ನಾನ ಪ್ರಾರಂಭಿಸಲಾಯ್ತು. ಇದು ಸೋಂಕಿನಿಂದಲೂ ನಮ್ಮನ್ನು ದೂರವಿಡುತ್ತದೆ.
ಎಣ್ಣೆ ಸ್ನಾನ ಮಾಡುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತದೆ. ಇದು ಉರಿಯೂತ ನಿವಾರಕವಾಗಿರುವುದರಿಂದ ಕೀಲುಗಳು ರಿಲ್ಯಾಕ್ಸ್ ಆಗುತ್ತವೆ. ಅಷ್ಟೇ ಅಲ್ಲ ಎಣ್ಣೆ ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಎಣ್ಣೆ ಸ್ನಾನ ಮಾಡುವುದರಿಂದ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳು ಬರುವುದಿಲ್ಲ. ಎಣ್ಣೆ ಸ್ನಾನವು ಮೂಳೆಗಳಿಗೆ ಸಾಕಷ್ಟು ರಿಲ್ಯಾಕ್ಸೇಶನ್ ನೀಡುತ್ತದೆ. ಮೂಳೆ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತದೆ.
ಎಳ್ಳಿನ ಎಣ್ಣೆಯಲ್ಲಿ ಅನೇಕ ವಿಧದ ವಿಟಮಿನ್‌ಗಳು ಮತ್ತು ಎಂಟಿಒಕ್ಸಿಡೆಂಟ್‌ಗಳು ಕಂಡುಬರುತ್ತವೆ. ಈ ಉತ್ಕರ್ಷಣ ನಿರೋಧಕಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಶೀತ ಮತ್ತು ಕೆಮ್ಮಿನಂತಹ ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.ಎಳ್ಳೆಣ್ಣೆ ಎಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಎಳ್ಳಿನ ಎಣ್ಣೆಯು ನಿರ್ವಿಶೀಕರಣ ಮತ್ತು ಆರ್ಧ್ರಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.