ಬೆಂಗಳೂರು : ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಶಕ್ತಿ ಸಂಪೂರ್ಣ ಕುಂದಿದೆ. ಸಾರಿಗೆ ನೌಕರರ ಯೋಗಕ್ಷೇಮವನ್ನು ಸಂಪೂರ್ಣ ಕಡೆಗಣಿಸಿರುವ ಸರ್ಕಾರ, ಅವರ ಬೇಕು-ಬೇಡಗಳನ್ನು ಆಲಿಸುವ ಸೌಜನ್ಯವನ್ನು ತೋರುತ್ತಿಲ್ಲ ಎಂದು ಕಾಂಗ್ರೆಸ್ X ನಲ್ಲಿ ವಾಗ್ಧಾಳಿ ನಡೆಸಿದೆ.
ಸಾರಿಗೆ ಸಂಸ್ಥೆಗಳು ಬೀದಿಗೆ ಬಿದ್ದ ರೀತಿ, ಸಾರಿಗೆ ನೌಕರರ ಬದುಕು ಸಹ ಬೀದಿಗೆ ಬರಲಿದೆ. ವಿಪಕ್ಷದಲ್ಲಿದ್ದಾಗ ಸಾರಿಗೆ ನೌಕರರ ಬಂದ್ಗೆ ಬೆಂಬಲಿಸಿ, ಮೊಸಳೆ ಕಣ್ಣೀರು ಹಾಕಿದ್ದ “ಕೈ” ನಾಯಕರು, ಅಧಿಕಾರಕ್ಕೆ ಬಂದ ನಂತರ ಸಾರಿಗೆ ಸಿಬ್ಬಂದಿಗಳಿಗೂ ಸಹ “ಕೈ” ಕೊಟ್ಟಿದ್ದಾರೆ ಎಂದು ಕಿಡಿಕಾರಿದೆ.
ಕಾವೇರಿ ವಿಚಾರದ ಕುರಿತು ಚಾಟಿ ಬೀಸಿದ ಬಿಜೆಪಿ ನೀರಾವರಿ ಯೋಜನೆಗಳ ವಿಷಯದಲ್ಲಿ ಕಾಂಗ್ರೆಸ್ ರಾಜ್ಯದ ಜನತೆಗೆ ಧೋಖಾ ಮಾಡುತ್ತಿರುವುದು ಇದೇ ಮೊದಲಲ್ಲ. 2013ರ ವಿಧಾನಸಭಾ ಚುನಾವಣೆಗೂ ಮುನ್ನ “ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ” ಎಂದು ಕೃಷ್ಣಾ ಕೊಳ್ಳದಲ್ಲಿ ಟೈಂ ಪಾಸ್ ಮಾಡಿದ್ದರು. ಆದರೆ 2013 ರಿಂದ 2018ರ ವರೆಗಿನ ತಮ್ಮ ಅಧಿಕಾರಾರವಧಿಯಲ್ಲಿ ಕೃಷ್ಣಾ ಕೊಳ್ಳದ ಕಡೆ ತಿರುಗಿ ಸಹ ನೋಡಲಿಲ್ಲ. 2016 ರಲ್ಲಿ ಅಧಿಕಾರದ ಮದದಿಂದ ಮಹಾದಾಯಿ ಹೋರಾಟಗಾರರ ಮೇಲೆ ಪೊಲೀಸ್ ಪಡೆ ಬಿಟ್ಟು ಅಮಾನವೀಯವಾಗಿ ಕಾಂಗ್ರೆಸ್ ಸರ್ಕಾರ ಹಲ್ಲೆ ಮಾಡಿಸಿತ್ತು. 2017 ರಲ್ಲಿ ತಾನೇ ಆಡಳಿತ ಪಕ್ಷವಾಗಿದ್ದರೂ ಜನರ ದಿಕ್ಕು ತಪ್ಪಿಸಲು ಮಹಾದಾಯಿಯ ಕೆಲವು ಹೋರಾಟಗಾರರನ್ನು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಗೆ ಕೂರಿಸಿತ್ತು. ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹30,000 ಕೋಟಿ ಮೀಸಲಿರಿಸುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯರವರು ಮಂಡಿಸಿದ ಈ ಬಾರಿಯ ಬಜೆಟ್ನಲ್ಲಿ ನೀರಾವರಿಗೆ ನೀಡಿದ್ದು ₹940 ಕೋಟಿ ಮಾತ್ರ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಪರಿಗಣಿಸಿ, ಈ ಬಾರಿ ₹5000 ಕೋಟಿ ಅನುದಾನವನ್ನು ಸಹ ಬಿಜೆಪಿ ಸರ್ಕಾರ ಒದಗಿಸಿದೆ.
ಸಿಂಗಾಟಲ್ಲೂರು ಏತ ನೀರಾವರಿ ಯೋಜನೆ, ದೇವತ್ಕಲ್ ಏತ ನೀರಾವರಿ ಯೋಜನೆ, ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ, ಕಲ್ಲಮರಡಿ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ರೈತರ ಬಾಳನ್ನು ಹಸನುಗೊಳಿಸಿದ್ದು ಬಿಜೆಪಿ ಸರ್ಕಾರ. ಆದರೆ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ತಮಿಳುನಾಡಿಗೆ ನೀರು ಹರಿಸಿ, ರಾಜ್ಯದ ರೈತರ ಬದುಕನ್ನು ಹದಗೆಡಿಸುತ್ತಿರುವುದು ಮಾತ್ರ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದೆ.