‘ದಿ ಎಲಿಫೆಂಟ್ ವಿಸ್ಪರರ್’ ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಮಾರ್ಚ್ 13 ರಂದು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆಯೇ ಪ್ರಪಂಚದಾದ್ಯಂತದ ಭಾರತೀಯರು ಸಂಭ್ರಮದಲ್ಲಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರವು ಆನೆಗಳನ್ನು ಸಲಹುತ್ತಿರುವ ದಂಪತಿಯ ಹೃದಯಸ್ಪರ್ಶಿ ಕಥೆಯ ಕಿರು ಸಾಕ್ಷ್ಯಚಿತ್ರವಾಗಿದೆ.
ಒಂದು ಅನಾಥ ಆನೆ, ರಘುವನ್ನು ನೋಡಿಕೊಳ್ಳುವ ದಂಪತಿಯ ಕಥೆ ಇದಾಗಿದೆ. ಆಸ್ಕರ್ ಬಂದ ನಂತರ ಆನೆಯನ್ನು ಕಣ್ತುಂಬಿಕೊಳ್ಳಲು ಜನರು ಶಿಬಿರಕ್ಕೆ ಮುಗಿಬೀಳುತ್ತಿದ್ದಾರೆ.
‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದಾರೆ. ಸಿಖ್ಯ ಎಂಟರ್‌ಟೈನ್‌ಮೆಂಟ್‌ನ ಗುನೀತ್ ಮೊಂಗಾ ಮತ್ತು ಅಚಿನ್ ಜೈನ್ ನಿರ್ಮಾಣದಲ್ಲಿ ಈ ಕಿರು ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಎರಡು ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಅಮೋಘವಾಗಿ ಚಿತ್ರಿಸಲಾಗಿದೆ.
ಹಾಲ್ ಔಟ್, ಹೌ ಡು ಯು ಮೆಷರ್ ಎ ಇಯರ್, ದಿ ಮಾರ್ಥಾ ಮಿಚೆಲ್ ಎಫೆಕ್ಟ್ ಮತ್ತು ಸ್ಟ್ರೇಂಜರ್ ಅಟ್ ದಿ ಗೇಟ್ ಜೊತೆಗೆ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ನಾಮನಿರ್ದೇಶನಗೊಂಡಿತ್ತು.
“ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಆನೆ ನನ್ನ ಅಚ್ಚುಮೆಚ್ಚಿನ ಪ್ರಾಣಿ ಮತ್ತು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿರುವುದು ನನಗೆ ಸಂತೋಷ ಮತ್ತು ಉತ್ಸುಕತೆಯನ್ನುಂಟು ಮಾಡಿದೆ” ಎಂದು ಶಿಬಿರಕ್ಕೆ ಭೇಟಿ ನೀಡಿದ ಪ್ರವಾಸಿಗರು ತಿಳಿಸುತ್ತಿದ್ದಾರೆ.