ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಬೋರ್ ವೆಲ್ ಗೆ ಬಿದ್ದ ಮಗುವನ್ನು ರಕ್ಷಿಸಲಾಗಿದೆ. ಮಗು ಚೆನ್ನಾಗಿದ್ದು, ರಕ್ಷಿಸಿದ ಬಳಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಗುವನ್ನು ರಕ್ಷಿಸಲು ನಮಗೆ ಸುಮಾರು 5 ಗಂಟೆಗಳು ಬೇಕಾಯಿತು ಎಂದು ಬಿಹಾರದ ನಳಂದದ ಎನ್‌ಡಿಆರ್‌ಎಫ್ ಅಧಿಕಾರಿ ರಂಜೀತ್ ಕುಮಾರ್ ಹೇಳಿದ್ದಾರೆ.
ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ 3 ವರ್ಷದ ಬಾಲಕ ಶಿವಂ 100 ಅಡಿ ಆಳದ ತೆರೆದ ಬೋರ್ ವೆಲ್ ಗೆ ಬಿದ್ದು ಸುಮಾರು 40-50 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. NDRF ಮತ್ತು ಇತರ ರಕ್ಷಣಾ ತಂಡಗಳು ಮಗುವಿನ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು. ಬೋರ್ ವೆಲ್ ಗೆ ಆಮ್ಲಜನಕ ಪೂರೈಕೆಗೆ ಪೈಪ್ ಅಳವಡಿಸಿ, ಕ್ಯಾಮೆರಾ ಮೂಲಕ ಮಗುವಿನ ಚಲನವಲನ ಗಮನಿಸಲಾಗುತ್ತಿತ್ತು.
ಸತತವಾಗಿ ನಡೆದ ರಕ್ಷಣಾ ಕಾರ್ಯಾಚರಣೆ ಫಲ ಕೊಟ್ಟಿದ್ದು, ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.