ನವದೆಹಲಿ: ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಪಾಕಿಸ್ತಾನಕ್ಕೆ ಕಾರ್ಯಕ್ರಮವೊಂದಕ್ಕೆ ಹೋಗಿ ಅಲ್ಲಿಯ ನೆಲದಲ್ಲಿ ನಿಂತು ಆ ದೇಶದವರಿಗೆ ಮಾತಿನ ಚಾಟಿ ಬೀಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 2008ರಲ್ಲಿ ಮುಂಬೈನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದವರು ಈಗಲೂ ಪಾಕಿಸ್ತಾನದಲ್ಲಿ ಆರಾಮವಾಗಿ ಅಡ್ಡಾಡಿಕೊಂಡಿದ್ದಾರೆ ಎಂದು ಜಾವೇದ್ ಅಖ್ತರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದು, ‘ಧನ್ಯವಾದ ಡಾ. ಆರ್ಥೋ ಆಯಿಲ್’ ಎಂದು ಕೆಲವರು ಹ್ಯಾಷ್ಟ್ಯಾಗ್ ಹಾಕಿದ್ದಾರೆ. ಡಾ. ಆರ್ಥೋ ಆಯಿಲ್ ಜಾಹೀರಾತಿನಲ್ಲಿ ಜಾವೇದ್ ಅಖ್ತರ್ ಅವರು ಕಾಣಿಸಿಕೊಳ್ಳುವ ಕಾರಣ, ತಮಾಷೆಯಾಗಿ ಇದರ ಹ್ಯಾಷ್ಟ್ಯಾಗ್ ಹಾಕಿರುವ ನೆಟ್ಟಿಗರು ಜಾವೇದ್ ಅವರನ್ನು ಶ್ಲಾಘಿಸುತ್ತಿದ್ದಾರೆ.
ಜಾವೇದ್ ಅಖ್ತರ್ ಪಾಕಿಸ್ತಾನದ ಖ್ಯಾತ ಉರ್ದು ಕವಿ ಫಯಜ್ ಅಹ್ಮದ್ ಫಯಜ್ ಅವರ ಸ್ಮರಣಾರ್ಥ ಲಾಹೋರ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಹೋಗಿದ್ದರು. ಆಗ ಒಬ್ಬ ಪಾಕಿಸ್ತಾನಿ, ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಬಂದಿದ್ದಿರಿ. ನೀವು ಭಾರತಕ್ಕೆ ವಾಪಸ್ ಹೋದಾಗ, ಪಾಕಿಸ್ತಾನೀ ಜನರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತೀರಾ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಅಖ್ತರ್, ನಾವು ಪರಸ್ಪರ ದೂರಿಕೊಳ್ಳುವುದು ಬೇಡ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕೋದಿಲ್ಲ. ಮುಂಬೈ ದಾಳಿ ಹೇಗಾಯ್ತು ಎಂದು ನೋಡಿದ್ದೇವೆ. ಆ ಉಗ್ರರು ನಾರ್ವೆಯಿಂದಲೋ, ಈಜಿಪ್ಟ್ನಿಂದಲೋ ಬಂದವರಲ್ಲ. ನಿಮ್ಮ ದೇಶದಲ್ಲಿ ಈಗಲೂ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದಿದ್ದಾರೆ. ಇದು ಭಾರತೀಯ ನೆಟ್ಟಿಗರ ಮನ ಗೆದ್ದಿದೆ.