ನವದೆಹಲಿ: ಯಾವುದೇ ರೂಪದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಕಾರಣಕ್ಕಾಗಿ ನಡೆಯುವ ಭಯೋತ್ಪಾದನೆ ಮಾನವೀಯತೆಗೆ ವಿರುದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ನವದೆಹಲಿಯ ಯಶೋಭೂಮಿಯಲ್ಲಿ ಒಂಬತ್ತನೇ ಜಿ 20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯನ್ನು(ಪಿ 20) ಉದ್ಘಾಟಿಸಿ ಮಾತನಾಡಿದ ಅವರು, ಘರ್ಷಣೆಗಳಿಂದ ತುಂಬಿರುವ ಜಗತ್ತು ಯಾರಿಗೂ ಪ್ರಯೋಜನವಾಗುವುದಿಲ್ಲ. ಇದು ಶಾಂತಿ ಮತ್ತು ಸಹೋದರತ್ವದ ಸಮಯ. ವಿಭಜಿತ ಜಗತ್ತು ತನ್ನ ಮುಂದೆ ಇರುವ ಸವಾಲುಗಳಿಗೆ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ. ಎಲ್ಲರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಒಟ್ಟಾಗಿ ಮುನ್ನಡೆಯುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
2001ರಲ್ಲಿ ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನೂ ಅವರು ನೆನಪಿಸಿಕೊಂಡರು. ಭಾರತ ಪ್ರಜಾಪ್ರಭುತ್ವ ಸಂಸ್ಥೆಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಚುನಾವಣೆಗಳನ್ನು ನಡೆಸುವುದು ಮಾತ್ರವಲ್ಲ, ಅದರಲ್ಲಿ ಜನರ ಭಾಗವಹಿಸುವಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಸಾರ್ವತ್ರಿಕ ಚುನಾವಣೆಗಳನ್ನು ಅತಿದೊಡ್ಡ ಹಬ್ಬವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.