ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಈ ಸೌಲಭ್ಯವನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿ ಶ್ರೇಣಿ ದೇವಸ್ಥಾನಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ.
ವಾರ್ಷಿಕ 25 ಲಕ್ಷ ರೂಪಾಯಿಗಳಿಗೂ ಹೆಚ್ಚು ಆದಾಯವುಳ್ಳ ದೇವಾಲಯಗಳಿಗೆ ಮೂಲಸೌಕರ್ಯ ಮೊದಲಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವಕಾಶವಿದ್ದು, ಒಂದರಿಂದ ಐದು ಲಕ್ಷ ರೂಪಾಯಿ ಆದಾಯ ಹೊಂದಿದ ಸಿ ಶ್ರೇಣಿ ದೇವಾಲಯಗಳು ಯಾವುದೇ ಸೌಕರ್ಯಗಳಿಲ್ಲದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ.
ಮಾಸಿಕ ವಿದ್ಯುತ್ ಬಿಲ್, ನೀರಿನ ವೆಚ್ಚ ಭರಿಸಲು ಕೂಡ ಸಿ ವರ್ಗದ ದೇವಾಲಯಗಳಿಗೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಸಿ ವರ್ಗದ ದೇವಾಲಯಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಉಚಿತ ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸುತ್ತಿದ್ದು, ಸಿ ದರ್ಜೆ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಸುವ ಕುರಿತು ಯೋಜನೆ ರೂಪಿಸಲಾಗಿದೆ. ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಸುಮಾರು 34,700 ದೇವಾಲಯಗಳಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗಿದೆ.