ತೆಲಂಗಾಣದ ಅಮೀನ್‌ಪುರದಲ್ಲಿ 30 ವರ್ಷದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ರಾಜಿತಾ ಎಂಬಾಕೆ ತನ್ನ ಹಳೆಯ ಗೆಳೆಯನ ಜೊತೆ ಸಂಬಂಧ ಬೆಳೆಸಲು ಈ ಕೃತ್ಯ ಎಸಗಿದ್ದಾಳೆ.
ರಾಜಿತಾ ಇಂಟರ್ಮೀಡಿಯೇಟ್ ಮುಗಿದ ನಂತರ ಚಂದ್ರಯ್ಯ ಎಂಬಾತನನ್ನು ಮದುವೆಯಾಗಿದ್ದಳು. ಇವರಿಗೆ ಮೂವರು ಮಕ್ಕಳಿದ್ದರು. ರಾಜಿತಾ ಶಾಲಾ ಮರುಮಿಲನ ಕಾರ್ಯಕ್ರಮದಲ್ಲಿ ಹಳೆಯ ಸ್ನೇಹಿತರನ್ನು ಭೇಟಿಯಾಗಿದ್ದಳು. ನಂತರ ವಾಟ್ಸಾಪ್ ಗ್ರೂಪ್ ಮೂಲಕ ಶಿವ ಕುಮಾರ್ ಎಂಬಾತನ ಜೊತೆ ಸಂಬಂಧ ಬೆಳೆಸಿದ್ದಳು.
ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ರಾಜಿತಾಳ ಮಕ್ಕಳು ಮತ್ತು ಪತಿ ಇದಕ್ಕೆ ಅಡ್ಡಿಯಾಗುತ್ತಾರೆಂದು ತಿಳಿದು ಮಕ್ಕಳನ್ನು ಕೊಂದಿದ್ದಾಳೆ. ಚಂದ್ರಯ್ಯ ಕೆಲಸಕ್ಕೆ ಹೋದಾಗ ರಾಜಿತಾ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಪತಿಗೆ ಹೊಟ್ಟೆ ನೋವು ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಳು.
ಚಂದ್ರಯ್ಯ ಮನೆಗೆ ಬಂದಾಗ ಮಕ್ಕಳು ಸತ್ತು ಬಿದ್ದಿದ್ದರು. ಪೊಲೀಸರು ತನಿಖೆ ನಡೆಸಿದಾಗ ರಾಜಿತಾ ಮತ್ತು ಶಿವ ಕುಮಾರ್ ಇಬ್ಬರೂ ಸೇರಿ ಮಕ್ಕಳನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.