ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರನ್ನು ಇಂದು ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆ ಕೂಗಿ ಪ್ರತಿಭಟಿಸ್ತಿದ್ದಾಗ ಶರ್ಮಿಳಾ ಸೇರಿದಂತೆ ಹಲವಾರು ಬೆಂಬಲಿಗರನ್ನು ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ಯಲಾಯಿತು.
ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರತಿಭಟನೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಕೆ ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೂಡ ಸಿಡಿದೆದ್ದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕನಿಷ್ಠ ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ರಿಕೆ ಸೋರಿಕೆಯಾದ ನಂತರ ರಾಜ್ಯದಲ್ಲಿ ಕನಿಷ್ಠ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿ ಶ್ರೀಮತಿ ಶರ್ಮಿಳಾ ಅವರು ತೆಲಂಗಾಣದಲ್ಲಿ ಸಾವಿರಾರು ಕಿಲೋಮೀಟರ್‌ಗಳನ್ನು ಕ್ರಮಿಸುವ ಪ್ರಮುಖ ಪಾದಯಾತ್ರೆ (ಕಾಲ್ನಡಿಗೆಯ ಮೆರವಣಿಗೆ) ನಡೆಸುತ್ತಿದ್ದಾರೆ.