ಟೆಕ್ಕಿಗಳ ಪಾಲಿಗೆ 2023ರ ಆರಂಭ ಆಘಾತಕಾರಿಯಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯಿಂದ ಹಲವು ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈಗಾಗಲೇ ಲಕ್ಷಾಂತರ ಮಂದಿಯನ್ನು ಮನೆಗೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ 2023ರಲ್ಲಿ ಈವರೆಗೆ 1.53 ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದು, ಅಂದರೆ ಪ್ರತಿನಿತ್ಯ 2,700 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. ಇನ್ನು ಈಗ ಉದ್ಯೋಗ ನಿರ್ವಹಿಸುತ್ತಿರುವವರಿಗೂ ಯಾವುದೇ ಭದ್ರತೆ ಇಲ್ಲದಂತಾಗಿದ್ದು ಯಾವಾಗ ತಮ್ಮ ಸರದಿ ಬರುತ್ತದೋ ಎಂಬ ಆತಂಕ ಕಾಡುತ್ತಿದೆ.
ಪ್ರಸ್ತುತ ಉದ್ಯೋಗದಲ್ಲಿರುವವರಿಗೂ ಸಹ ವೇತನ ಕಡಿತ, ಪ್ರಮೋಷನ್ ಗಳನ್ನು ನಿಲ್ಲಿಸಲಾಗಿದ್ದು, ಈ ವರ್ಷದ ಮಧ್ಯದವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಫ್ರೆಷರ್ಸ್ ಗಳನ್ನು ನೇಮಕ ಮಾಡಿಕೊಂಡಿದ್ದ ಕೆಲ ಕಂಪನಿಗಳು ಅವರುಗಳಿಗೆ ಈವರೆಗೆ ನೇಮಕಾತಿ ಪತ್ರ ನೀಡಿಲ್ಲವೆಂದು ಹೇಳಲಾಗಿದೆ.
ಕಳೆದ ವರ್ಷ ಫೇಸ್ಬುಕ್ ಒಡೆತನದ ಮೆಟಾ 11 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಗೂಗಲ್ ಈ ವರ್ಷದಲ್ಲಿ ಶೇಕಡಾ 6ರಷ್ಟು ಉದ್ಯೋಗ ಕಡಿತ ಮಾಡುವುದರೊಂದಿಗೆ 12,000 ಮಂದಿಯನ್ನು ವಜಾಗೊಳಿಸಿತ್ತು. ಮೈಕ್ರೋಸಾಫ್ಟ್ 10,000 ಮಂದಿಯನ್ನು ಮನೆಗೆ ಕಳುಹಿಸಿದರೆ ಅಮೆಜಾನ್ ಅತಿ ಹೆಚ್ಚು ಅಂದರೆ 18,000 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ. ಇನ್ನು ಡೆಲ್ ಟೆಕ್ನಾಲಜೀಸ್ 6,650 ಮಂದಿಯನ್ನು ಮನೆಗೆ ಕಳುಹಿಸಿದೆ.