ಬೆಂಗಳೂರು: 2023-24 ನೇ ಸಾಲಿನ ಸರ್ಕಾರಿ ಪ್ರಾಥಮಿಕ/ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಅಂತರ್ ವಿಭಾಗದ ಸಾಮಾನ್ಯ ವರ್ಗಾವಣೆ ಆದೇಶಗಳನ್ನು ಪಡೆದುಕೊಳ್ಳುವಂತೆ ಬೆಳಗಾವಿ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಸಹನಿರ್ದೇಶಕರ ಕಚೇರಿಯಿಂದ ಸೂಚನೆ ನೀಡಲಾಗಿದೆ.
2023-24 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರ ಮತ್ತು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ/ತತ್ಸಮಾನ ವೃಂದದ ಶಿಕ್ಷಕರ ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ/ತತ್ಸಮಾನ ವೃಂದದ ಅಧಿಕಾರಿಗಳ ಅಂತರ್ ವಿಭಾಗದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಶಿಕ್ಷಕರ ಹಿತದೃಷ್ಟಿಯಿಂದ ರೌಂಡ್ ರಾಬಿನ್ (Round Robin) ಮಾದರಿಯಲ್ಲಿ ಕೇಂದ್ರ ಕಛೇರಿಯಿಂದ ಜರುಗಿಸಲಾಗಿದೆ.
ವರ್ಗಾವಣೆಗೊಂಡ ಶಿಕ್ಷಕರ ಆದೇಶಗಳನ್ನು ಈ ಕಚೇರಿಗೆ ನೀಡಲಾಗಿರುತ್ತದೆ. ಪೂರಕ ದಾಖಲೆಗಳನ್ನು ಈ ಕಚೇರಿಗೆ ಒಪ್ಪಿಸಿ ತಮ್ಮ ತಮ್ಮ ಜಿಲ್ಲೆಗೆ ಸಂಬಂಧಿಸಿದ ವರ್ಗಾವಣಾ ಆದೇಶಗಳನ್ನು ಪಡೆದುಕೊಂಡು ಶಿಕ್ಷಕರಿಗೆ ಸಕಾಲದಲ್ಲಿ ಜಾರಿಗೊಳಿಸಲು ಕ್ರಮ ವಹಿಸಲು ಸೂಚಿಸಿದೆ. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ತಾವೇ ನೇರ ಜವಾಬ್ದಾರರಾಗಿರುತ್ತೀರಿ ಎಂದು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಾರವಾರ, ಶಿರಶಿ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಲಾಗಿದೆ.