ಬೆಂಗಳೂರು: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪಟ್ಟಿಯಲ್ಲಿ ಲೋಪ ದೋಷ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹೆಚ್ಚುವರಿ ಶಿಕ್ಷಕರ ವರ್ಗಾವಣೆಗಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಲೋಪ ದೋಷಗಳನ್ನು ಸರಿಪಡಿಸದೇ ವರ್ಗಾವಣೆ ನಡೆಸಲು ಮುಂದಾಗಿದ್ದು, ಇದಕ್ಕೆ ಶಿಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸೂಚನೆ ಮೇರೆಗೆ ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಶಿಕ್ಷಕರ ಪರಿಷ್ಕೃತ ವರ್ಗಾವಣೆಯ ವೇಳಾಪಟ್ಟಿಯ ಪ್ರಕಾರ ಮಂಗಳವಾರದಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಮೀಸಲಾತಿ ಕೋರಿ ಪ್ರಮಾಣ ಪತ್ರ ಸಲ್ಲಿಸಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಶಿಕ್ಷಕರು ಕೌನ್ಸೆಲಿಂಗ್ ಕೇಂದ್ರಗಳಲ್ಲಿ ವಾಗ್ವಾದ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಕ್ಷಣವೇ ಕೌನ್ಸೆಲಿಂಗ್ ತಡೆಹಿಡಿಯಲು ಸೂಚಿಸಿದ್ದಾರೆ.
ಸಚಿವರ ಸೂಚನೆ ಮೇರೆಗೆ ಸುತ್ತೋಲೆ ಹೊರಡಿಸಿದ ನಿರ್ದೇಶಕರು ಸ್ಥಳ ನಿಯತ್ತಿ ಆದೇಶ ರದ್ದುಗೊಳಿಸಲು ಸೂಚಿಸಿದ್ದಾರೆ. ತಾತ್ಕಾಲಿಕವಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.