ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಘಟಕ ಅಥವಾ ವಿಭಾಗದ ಹೊರಗಿನ ಪರಸ್ಪರ ವರ್ಗಾವಣೆಗೆ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಶಿಕ್ಷಕರಿಗೆ ಆದ್ಯತೆಯ ವರ್ಗಾವಣೆ ಅವಕಾಶವಿದೆ.
ಪರಸ್ಪರ ವರ್ಗಾವಣೆಗೆ ಸೇವಾವಧಿ ಪ್ರಕರಣದಲ್ಲಿ ಕನಿಷ್ಠ ಐದು ವರ್ಷ ಹಾಗೂ ಕರ್ತವ್ಯ ನಿರತ ಸ್ಥಳದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರುವವರನ್ನು ಮಾತ್ರ ಪರಿಗಣಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಸೇವಾವಧಿಯಲ್ಲಿ ಒಂದು ಸಲ ಮಾತ್ರ ಆದ್ಯತೆಯನ್ನು ಕ್ಲೇಮ್ ಮಾಡಲು ಅವಕಾಶವಿದ್ದು, ಈ ನಿಯಮ ಹೆಚ್ಚುವರಿ ವರ್ಗಾವಣೆಗೆ ಅನ್ವಯವಾಗುವುದಿಲ್ಲ. ಪತಿ-ಪತ್ನಿ ಪ್ರಕರಣದಲ್ಲಿ ಒಬ್ಬರು ಜಿಲ್ಲೆಯಿಂದ ಹೊರಗೆ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅಂತವರಿಗೆ ಹೆಚ್ಚುವರಿಯಲ್ಲಿ ಆದ್ಯತೆ ಪರಿಗಣಿಸುವುದು, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪದವೀಧರ ಶಿಕ್ಷಕರಿಗೆ ಅವರ ನೇಮಕಾತಿ ಆದೇಶದಲ್ಲಿ ಐದು ವರ್ಷ ಅಥವಾ 10 ವರ್ಷ ಅದೇ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಷರತ್ತು ವಿಧಿಸಿದ್ದಲ್ಲಿ ನೇಮಕಾತಿ ಆದೇಶ ಪರಿಗಣಿಸಬೇಕು. ಸೇವಾ ಹಿರಿತನ ಪರಿಗಣಿಸುವ ಸಂದರ್ಭದಲ್ಲಿ ಅನೇಕರು ಒಂದೇ ದಿನ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಜನ್ಮ ದಿನಾಂಕವನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.