ಬೆಂಗಳೂರು: ಮೂಲ ಶಾಲೆಗೆ ತೆರಳದ ನಿಯೋಜಿತ ಶಿಕ್ಷಕರ ವೇತನಕ್ಕೆ ತಡೆ ನೀಡುವುದಾಗಿ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಶಾಲೆಗೆ ಹಾಜರಾಗದಿದ್ದರೆ ಕರ್ತವ್ಯ ನಿರ್ಲಕ್ಷವೆಂದು ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಲಾಗಿದೆ.
ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಕೂಡಲೇ ತಮ್ಮ ಮೂಲ ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರ ವೇತನ ತಡೆಹಿಡಿದು ಕರ್ತವ್ಯ ನಿರ್ಲಕ್ಷದ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.
ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ಅವರು ಈ ಕುರಿತಾಗಿ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಡಿಡಿಪಿಐ ಮತ್ತು ಬಿಇಒಗಳು ನಿಯಮ ಬಾಹಿರವಾಗಿ ಶಿಕ್ಷಕರನ್ನು ಬೇರೆ ಶಾಲೆ, ಕಚೇರಿ, ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ಸಾಲಿನ ಅಂತ್ಯಕ್ಕೆ ಆ ಎಲ್ಲಾ ನಿಯೋಜನೆಗಳನ್ನು ರದ್ದುಪಡಿಸುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು.
ಈ ಆದೇಶವನ್ನು ಪಾಲಿಸಿ ಮೂಲ ಶಾಲೆಗೆ ಕರ್ತವ್ಯಕ್ಕೆ ಕೆಲವು ಶಿಕ್ಷಕರು ಹಿಂತಿರುಗದೇ ನಿರ್ಲಕ್ಷ ವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸರ್ಕಾರದಿಂದ ಆದೇಶವಾದ ಪ್ರಕರಣ ಹೊರತುಪಡಿಸಿ ಉಳಿದ ಎಲ್ಲಾ ಶಿಕ್ಷಕರು ತಮ್ಮ ಮೂಲ ಶಾಲೆಗಳಿಗೆ ವಾಪಾಸ್ ಆಗಬೇಕೆಂದು ಸೂಚನೆ ನೀಡಲಾಗಿದೆ.