ಬೆಂಗಳೂರು: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ 2023 -24ನೇ ಸಾಲಿಗೆ ಅನ್ವಯವಾಗುವಂತೆ 27,000 ಅತಿಥಿ ಶಿಕ್ಷಕರನ್ನು ಮೇ 26ರೊಳಗೆ ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗಲಿದ್ದು, ಜೂನ್ 1 ರಿಂದ ತರಗತಿ ಚಟುವಟಿಕೆ ಶುರುವಾಗುತ್ತವೆ. ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ 27,000 ಅತಿಥಿ ಶಿಕ್ಷಕರ ನೇಮಕಾತಿಗೆ ನಿರ್ದಿಷ್ಟ ಸ್ಥಾನ ಹಂಚಿಕೆ ಮಾಡಲಾಗಿದ್ದು, ಆರರಿಂದ ಎಂಟನೇ ತರಗತಿಗೆ ನೇಮಕ ಮಾಡಿರುವ 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತು ವಿಧಿಸಿ ಮೇ 26 ರೊಳಗೆ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಡಿಡಿಪಿಐ ಮತ್ತು ಬಿಇಒ ಗಳಿಗೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
2022- 23 ನೇ ಸಾಲಿನಲ್ಲಿ ಅಗತ್ಯತೆ, ಹೆಚ್ಚುವರಿ ಶಿಕ್ಷಕರ ಹುದ್ದೆ ಗುರುತಿಸುವ, ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ಈಗಾಗಲೇ ಜಿಲ್ಲಾ ಹಂತದಲ್ಲಿ ಕೈಗೊಳ್ಳಲಾಗಿದ್ದು, ಇದರ ಆಧಾರದಲ್ಲಿ ಖಾಲಿ ಹುದ್ದೆ ಇರುವ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಶಾಲಾ ಶಿಕ್ಷಕರ ಮೂಲಕವೇ ಅತಿಥಿ ಶಿಕ್ಷಕರ ಆಯ್ಕೆಯನ್ನು ಮಾಡಬೇಕು ಎಂದು ತಿಳಿಸಲಾಗಿದೆ.