ಬೆಂಗಳೂರು: ಹೊಸ ನೀತಿಯ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಮಕ್ಕಳು ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿರುವ 10,500 ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ.
ಒಂದರಿಂದ ಐದನೇ ತರಗತಿಯವರೆಗೆ 40 ವಿದ್ಯಾರ್ಥಿಗಳಿಗೆ, ಆರರಿಂದ ಎಂಟನೇ ತರಗತಿಯವರೆಗೆ 35 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರಂತೆ ಸರ್ಕಾರದಿಂದ ಅನುಪಾತ ನಿಗದಿ ಮಾಡಲಾಗಿದ್ದು, ಇದಕ್ಕೆ ಅನುಗುಣವಾಗಿ ರಾಜ್ಯದ ಶಾಲೆಗಳಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಶಿಕ್ಷಕರ ಪಟ್ಟಿ ತಯಾರಿಸಿ ಅಗತ್ಯವಿರುವ ಬೇರೆ ಶಾಲೆಗಳಿಗೆ ಅವರನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಈ ಸಲ 10,500 ಶಿಕ್ಷಕರು ಹೆಚ್ಚುವರಿ ಆಗಿದ್ದಾರೆ.
ವರ್ಗಾವಣೆಗೆ ಮುನ್ನವೇ ಅವರಿಗೆ ಸ್ಥಳ ನಿಯೋಜಿಸಲಾಗುತ್ತಿದ್ದು, ಬಳಿಕ ಉಳಿಯುವ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸಾಮಾನ್ಯ ವರ್ಗಾವಣೆ ಮಾಡಲಾಗುವುದು. 1 ರಿಂದ 8 ನೇ ತರಗತಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1.53 ಲಕ್ಷ ಶಿಕ್ಷಕರಿದ್ದು, ಶೇ. 7 ರಷ್ಟು ಶಿಕ್ಷಕರು ವರ್ಗಾವಣೆಗೆ ಅವಕಾಶ ಪಡೆಯಲಿದ್ದಾರೆ. ಈ ಬಾರಿ 10,700 ಪ್ರಾಥಮಿಕ ಶಾಲೆ ಶಿಕ್ಷಕರು ವರ್ಗಾವಣೆಗೆ ಅರ್ಹತೆ ಪಡೆಯುವರು ಎಂದು ಹೇಳಲಾಗಿದೆ.