
ಚೆನ್ನೈ: ಸಾವಿರ ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಮುಷ್ಕರ ಆರಂಭಕ್ಕೂ ಮುನ್ನವೇ ತಮಿಳುನಾಡು ಬಿಜೆಪಿ ಘಟಕ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರ್ಕಾರಿ ಸ್ವಾಮ್ಯದ ಮದ್ಯದ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (TASMAC) ನಡೆದಿದೆ ಎನ್ನಲಾದ ಸಾವಿರ ಕೋಟಿ ಅಕ್ರಮ ಪ್ರಕರಣ ಖಂಡಿಸಿ ರಾಜ್ಯ ಬಿಜೆಪಿ ಇಂದು ಅಣ್ಣಾಮಲೈ ನೇತೃತ್ವದಲ್ಲಿ ಮುಷ್ಕರ ಘೋಷಿಸಿತ್ತು. ಅಲ್ಲದೇ ಪ್ರತಿಭಟನಾ ಮೆರವಣಿಗೆಗೆ ಸಿದ್ಧತೆ ನಡೆಸಿತ್ತು.
ಕಪ್ಪು ಶರ್ಟ್ ಧರಿಸಿ ಪ್ರತಿಭಟನೆಗೆ ಸಿದ್ಧರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಅವರ ನಿವಾಸದಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಮಹಿಳಾ ಮೋರ್ಚಾ ಮುಖ್ಯಸ್ಥೆ, ಶಾಸಕಿ ವನತಿ ಶ್ರೀನಿವಾಸನ್, ವಿನೋಜ್ ಸೆಲ್ವಂ, ಅಮರ್ ಪ್ರಸಾದ್ ರೆಡ್ಡಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.