ನಟ ರಣದೀಪ್ ಹೂಡಾ ಅಭಿನಯದ ‘ಸ್ವಾತಂತ್ರ್ಯವೀರ ಸಾವರ್ಕರ್’ ಸಿನಿಮಾ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಅವರ ‘ಲಾಪತಾ ಲೇಡಿಸ್’ ಹೊರತುಪಡಿಸಿ ಭಾರತದಿಂದ ಮತ್ತೆ ಯಾವುದೇ ಸಿನಿಮಾ ಆಸ್ಕರ್ ಅಂಗಳಕ್ಕೆ ಅಧಿಕೃತವಾಗಿ ಹೋಗಿಲ್ಲ.
ಆದರೆ, ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದ ನಿರ್ಮಾಪಕರ ತಪ್ಪು ಮಾಹಿತಿಯಿಂದಾಗಿ ಗೊಂದಲ ಉಂಟಾಗಿದೆ. 2025 ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ನಮ್ಮ ಸಿನಿಮಾ ಅಧಿಕೃತವಾಗಿ ಸಲ್ಲಿಕೆಯಾಗಿದೆ ಮೆಚ್ಚುಗೆ ನೀಡಿದ್ದಕ್ಕೆ ಫಿಲಂ ಫೆಡರೇಶನ್ ಆಫ್ ಇಂಡಿಯಾಗೆ ಧನ್ಯವಾದಗಳು ಎಂದು ನಿರ್ಮಾಪಕ ಸಂದೀಪ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅವರಿಗೆ ಅಭಿನಂದನೆಗಳ ಸುರಿಮಳೆಯಾಗಿತ್ತು.
ಒಂದು ದೇಶದಿಂದ ಅಧಿಕೃತವಾಗಿ ಎರಡು ಸಿನಿಮಾಗಳನ್ನು ಆಸ್ಕರ್ ಗೆ ಅಧಿಕೃತವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ‘ಲಾಪತಾ ಲೇಡೀಸ್’ ಆಯ್ಕೆಯಾಗಿದ್ದರಿಂದ ಮತ್ತೊಂದು ಸಿನಿಮಾ ಅಧಿಕೃತ ಪ್ರವೇಶ ಪಡೆದಿದ್ದು ಹೇಗೆ ಎನ್ನುವ ಪ್ರಶ್ನೆ ಎದುರಾಗಿತ್ತು.
ಸಾವರ್ಕರ್ ಚಿತ್ರವನ್ನು ಚಿತ್ರತಂಡವೇ ಬೇಕಿದ್ದರೆ ಆಸ್ಕರ್ ಗೆ ಕಳುಹಿಸಬಹುದು. ಅದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ ಮತ್ತು ಅನೇಕ ಪ್ರತಿಕ್ರಿಯೆಗಳು ಕೂಡ ಇರುತ್ತವೆ. ಫಿಲಂ ಫೆಡರೇಶನ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಅಧಿಕೃತವಾಗಿ ‘ವೀರ ಸಾವರ್ಕರ್’ ಚಿತ್ರವನ್ನು ಕಳುಹಿಸಿಲ್ಲ ಎಂದು ತಿಳಿಸಿದೆ. ಸ್ವಾತಂತ್ರ್ಯವೀರ ಸಾವರ್ಕರ್ ನಿರ್ಮಾಪಕರ ಎಡವಟ್ಟಿನಿಂದ ಈ ಗೊಂದಲ ಉಂಟಾಗಿದೆ. ನೆಟ್ಟಿಗರು ಚಿತ್ರತಂಡಕ್ಕೆ ಛೀಮಾರಿ ಹಾಕಿದ್ದಾರೆ.