ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ, ನಿಗಮದ ಜಾಗ ಬಾಡಿಗೆ ನೀಡುವ ವೇಳೆ ನಿಯಮ ಉಲ್ಲಂಘಿಸಿ ಟೆಂಡರ್ ಆಹ್ವಾನಿಸಿದ ಆರೋಪ ಹಿನ್ನೆಲೆಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
2020 -21ನೇ ಸಾಲಿನಲ್ಲಿ ವಿದ್ಯಾವಿಕಾಸ ಯೋಜನೆಯಡಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಪೂರೈಕೆಗೆ ಶಿಕ್ಷಣ ಇಲಾಖೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಕಾರ್ಯಾದೇಶ ನೀಡಿದ್ದು, ಆದರೆ, ನಿಗಮದ ವತಿಯಿಂದ ಪೂರೈಕೆ ಮಾಡಿರುವ ಬಟ್ಟೆ ಕಳಪೆ ಗುಣಮಟ್ಟದಾಗಿದೆ ಎಂದು 2023ರ ಫೆಬ್ರವರಿ 21ರಂದು ಕೇಂದ್ರ ರೇಷ್ಮೆ ಮಂಡಳಿ ವರದಿ ನೀಡಿತ್ತು.
ನಿಯಮದ ಅನ್ವಯ ನಿಗಮದ ನೋಂದಾಯಿತ ಕೈಮಗ್ಗ ನೇಕಾರರಿಂದ ಬಟ್ಟೆ ಖರೀದಿಸುವ ಬದಲು ಬೇರೆಡೆಯಿಂದ ಬಟ್ಟೆ ಖರೀದಿಸಿದ್ದರು. ಕಳಪೆ ಗುಣಮಟ್ಟದ ಸಮವಸ್ತ್ರದ ಬಟ್ಟೆ ಪೂರೈಕೆ ಮಾಡಿದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ನಿಗಮದ ಎಂಡಿ ಎಸ್. ಮುದ್ದಯ್ಯ ಅವರನ್ನು ಅಮಾನತು ಮಾಡಲಾಗಿದೆ.