ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಆಕ್ರಮ ಎಸಗಿದ ಆರೋಪದ ಮೇಲೆ ಖರೀದಿ ಕೇಂದ್ರಗಳ ಆರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಹಿರಿಯ ಮತ್ತು ಕಿರಿಯ ಸಹಾಯಕರನ್ನು ಸರ್ಕಾರ ಅಮಾನತುಗೊಳಿಸಿದೆ. ಹಿರಿಯ ಸಹಾಯಕರಾದ ಲಿಂಗಣ್ಣ ಜಮಖಂಡಿ, ಮೌನೇಶ್ ಗೌಡ, ಮಂಜುನಾಥ ರಾಜ ಅರಸ್, ವೆಂಕಟರೆಡ್ಡಿ ಪಾಟೀಲ್, ಕಿರಿಯ ಸಹಾಯಕರಾದ ದಿವಾಕರ, ಹುಸೇನ್ ಸಾಬ್ ನದಾಫ್ ಅವರನ್ನು ಅಮಾನತು ಮಾಡಲಾಗಿದೆ.
ಖರೀದಿ ಕೇಂದ್ರಗಳಲ್ಲಿ ಅಕ್ರಮವಾಗಿ ಹೆಚ್ಚುವರಿ ನೋಂದಣಿ ಮಾಡಿರುವುದು ತಂತ್ರಾಂಶದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಅವರ ನಿರ್ದೇಶನದ ಮೇರೆಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಂಡಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರ ಹೆಸರಲ್ಲಿ ಮಧ್ಯವರ್ತಿಗಳು ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚನೆ ನೀಡಿದ್ದಾರೆ.