ಸೂರತ್: ಗುಜರಾತ್ ನ ಸೂರತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ. ಬಂಧನದಿಂದ ಪಾರಾಗಲೂ ‘ದೃಶ್ಯಂ’ ವೀಕ್ಷಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರ ಜತೆ ಸೇರಿ ಸತತ ಮೂರು ದಿನಗಳ ಕಾಲ ‘ಕಾಣೆ’ಯಾಗಿರುವ ಮಗುವಿನ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮಗುವಿನ ತಾಯಿಯ ಮೇಲೆ ಶಂಕೆ ವ್ಯಕ್ತವಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.
ಸೂರತ್ ನ ದಿಂಡೋಲಿ ಪ್ರದೇಶದಲ್ಲಿ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ನಯನಾ ಮಾಂಡವಿ ತನ್ನ ಎರಡೂವರೆ ವರ್ಷದ ಮಗು ವೀರ್ ಮಾಂಡವಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಮಹಿಳೆ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಮಗು ಆವರಣದಿಂದ ಹೊರಬರುವುದು ಕಂಡು ಬಂದಿಲ್ಲ. ಇದನ್ನು ಆಧರಿಸಿ, ಪೊಲೀಸರು ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಗುವನ್ನು ಕೊಂದು ನಿರ್ಮಾಣ ಹಂತದ ಶೌಚಾಲಯ ಗುಂಡಿಗೆ ಹಾಕಿರುವುದಾಗಿ ತಿಳಿಸಿದ್ದಾರೆ.
ತನ್ನ ಮಗನನ್ನು ಕೊಂದು ಶವವನ್ನು ಬಚ್ಚಿಟ್ಟಿರುವ ಉದ್ದೇಶದ ಬಗ್ಗೆ ಮಹಿಳೆಯನ್ನು ಕೇಳಿದಾಗ, ತಾನು ಮೂಲತಃ ಜಾರ್ಖಂಡ್‌ನವಳಾಗಿದ್ದು, ಅಲ್ಲಿ ಪ್ರೇಮಿ ಇದ್ದಾನೆ. ಮಗುವಿನೊಂದಿಗೆ ಬಂದರೆ ಸೇರಿಸುವುದಿಲ್ಲ ಎಂದು ತಿಳಿಸಿದ್ದ. ತನ್ನ ಪ್ರಿಯಕರನ ಸೇರುವ ಪ್ರಯತ್ನದಲ್ಲಿ ಮಹಿಳೆ ತನ್ನ ಮಗನನ್ನು ಕೊಂದಳು. ಕೊಲೆ ಮಾಡಿದ ನಂತರ, ದೇಹವನ್ನು ಹೇಗೆ ಮರೆಮಾಡಬೇಕೆಂದು ತಿಳಿಯಲು ಅವಳು ‘ದೃಶ್ಯಂ’ ಚಲನಚಿತ್ರವನ್ನು ನೋಡಿದಳು.
ಕೊಲೆಯ ನಂತರ ಶವವನ್ನು ವಿಲೇವಾರಿ ಮಾಡುವ ದೃಶ್ಯವಿದ್ದು, ಇದನ್ನು ಅನುಸರಿಸುವುದರಿಂದ ಪೊಲೀಸರು ತನ್ನನ್ನು ಬಂಧಿಸಲು ಸಾಧ್ಯವಾಗುವುದಿಲ್ಲ ಮತ್ತು ಜಾರ್ಖಂಡ್‌ನಲ್ಲಿರುವ ತನ್ನ ಪ್ರಿಯಕರನೊಂದಿಗೆ ಸೇರಬಹುದು ಎಂದು ಮಹಿಳೆ ನಂಬಿದ್ದಳು.