ಹಾವೇರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆ ಮಾಡಲಾಗುತ್ತಿರುವ ಮೊಟ್ಟೆಗಳ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಕೊಳೆತ ಮೊಟ್ಟೆ ಪೂರೈಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ಬಳಿಕ ಇದೀಗ ಹಾವೇರಿ, ಕೊಡಗು ಜಿಲ್ಲೆಗಳ ಹಲವು ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ವಾರದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಇದೀಗ ಹಾವೇರಿ ಜಿಲ್ಲೆಯ ಹಲವು ಅಂಗನವಡಿಗಳಲ್ಲಿಯೂ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆಯಾಗಿರುವುದು ಕಂಡುಬಂದಿದೆ. ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ನೀಡಲಾಗುತ್ತಿರುವ ಮೊಟ್ಟೆಗಳಲ್ಲಿಯೂ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ.
ಇನ್ನು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನತ್ತೂರು ಗ್ರಾಮದ ಅಂಗನವಾಡಿಗೂ ಕೊಳೆತ ಮೊಟ್ಟೆ ಪೂರೈಕೆ ಆಗಿದ್ದು, ಕೊಳೆತು ನಾರುತ್ತಿರುವ ಇಂತಹ ಮೊಟ್ಟೆ ತಿಂದರೆ ಮಕ್ಕಳ ಆರೋಗ್ಯದ ಗತಿಯೇನು? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.