
ಅಪರೂಪದ ಸೂಪರ್ ಬ್ಲೂ ಮೂನ್ ಇನ್ನು ಎರಡು ದಿನಗಳ ಕಾಲ ಆಗಸದಲ್ಲಿ ಗೋಚರಿಸಲಿದೆ. ವಿಶ್ವದಾದ್ಯಂತ ಬ್ಲೂ ಮೂನ್ ಅನ್ನು ಕಣ್ತುಂಬಿಕೊಳ್ಳಬಹುದು. ಬ್ಲೂ ಮೂನ್ ಮತ್ತು ಸೂಪರ್ ಮೂನ್ ಎರಡೂ ಆಗಿರುವ ಹುಣ್ಣಿಮೆಯನ್ನು ʼಸೂಪರ್ ಬ್ಲೂ ಮೂನ್ʼ ಎಂದು ಕರೆಯಲಾಗುತ್ತದೆ. ಈ ವಿದ್ಯಮಾನ ವರ್ಷಕ್ಕೆ ಕೆಲವೇ ಕೆಲವು ಬಾರಿ ಸಂಭವಿಸುತ್ತದೆ. ಈ ಸಮಯದಲ್ಲಿ ಚಂದ್ರನು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಇದು ಈ ವರ್ಷದ ಮೊದಲ ಸೂಪರ್ ಬ್ಲೂ ಮೂನ್.
ಆದರೆ ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಗೋಚರಿಸುತ್ತಾನೆ ಎಂದುಕೊಳ್ಳಬೇಡಿ. ಚಂದ್ರ ನೀಲಿ ಬಣ್ಣವನ್ನು ಹೊಂದಿರುವುದಿಲ್ಲ. ಭೂಮಿಯ ವಾತಾವರಣದಲ್ಲಿನ ಕಾಳ್ಗಿಚ್ಚುಗಳಿಂದ ಉಂಟಾಗುವ ಧೂಳಿನ ಕಣಗಳಿಂದಾಗುವ ಬೆಳಕಿನ ಚದುರುವಿಕೆಯಿಂದ ಚಂದ್ರ ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು.
2024 ರಲ್ಲಿ ಒಟ್ಟು ನಾಲ್ಕು ಸೂಪರ್‌ಮೂನ್‌ಗಳು ಕಾಣಿಸಿಕೊಳ್ಳಲಿವೆ. ಇದು ಮೊದಲನೆಯದು, ಸೆಪ್ಟೆಂಬರ್ 17, ಅಕ್ಟೋಬರ್ 17 ಮತ್ತು ನವೆಂಬರ್ 15 ರಂದು ಇನ್ನೂ ಮೂರು ಸೂಪರ್‌ಮೂನ್‌ಗಳು ಸಂಭವಿಸಲಿವೆ.
ಸೂಪರ್ ಬ್ಲೂ ಮೂನ್ ಬುಧವಾರದವರೆಗೆ ಪ್ರಪಂಚದಾದ್ಯಂತ ಗೋಚರಿಸುತ್ತದೆ. ಒಂದು ಋತುವಿನಲ್ಲಿ ಬರುವ ನಾಲ್ಕು ಹುಣ್ಣಿಮೆಗಳಲ್ಲಿ ಇದು ಮೂರನೆಯದು. ಸೂಪರ್ ಬ್ಲೂ ಮೂನ್ ಸಾಮಾನ್ಯ ಹುಣ್ಣಿಮೆಗಿಂತ ಶೇಕಡಾ 30 ರಷ್ಟು ಹೆಚ್ಚು ಪ್ರಕಾಶಮಾನವಾಗಿರುತ್ತದೆ ಮತ್ತು ಶೇ.14 ರಷ್ಟು ದೊಡ್ಡದಾಗಿರುತ್ತದೆ. ತಿಂಗಳಿಗೆ ಎರಡು ಬಾರಿ ಹುಣ್ಣಿಮೆ ಕಾಣಿಸಿಕೊಂಡರೆ ಅದನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ.
ಚಂದ್ರನು ಭೂಮಿಗೆ ಹತ್ತಿರದಲ್ಲಿದ್ದಾಗ ಪೆರಿಜಿ ಎಂದು ಕರೆಯಲಾಗುತ್ತದೆ. ಆಗ ಚಂದ್ರ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿ ಕಾಣುತ್ತಾನೆ. ಚಂದ್ರನು ಭೂಮಿಯಿಂದ ದೂರದಲ್ಲಿದ್ದಾಗ ಅದನ್ನು ಅಪೋಜಿ ಎಂದು ಕರೆಯಲಾಗುತ್ತದೆ, ಆಗ ಚಿಕ್ಕದಾಗಿ ಗೋಚರಿಸುತ್ತಾನೆ. ಪೆರಿಜಿಯಲ್ಲಿ ಚಂದ್ರನು ಭೂಮಿಯಿಂದ ಸುಮಾರು 363,300 ಕಿಲೋಮೀಟರ್ ದೂರದಲ್ಲಿರುತ್ತಾನೆ, ಅಪೋಜಿಯಲ್ಲಿ ಅದು ಸುಮಾರು 405,500 ಕಿಮೀ ದೂರದಲ್ಲಿರುತ್ತಾನೆ.