ದಾವಣಗೆರೆ: ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಜಗಳೂರು ತಾಲೂಕಿನ ಮಧು ಮತ್ತು ನಾಗೇಂದ್ರ ಸ್ವಾಮಿ ಅವರ ವಿರುದ್ಧ ಜಗಳೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
17 ವರ್ಷದ ವಿದ್ಯಾರ್ಥಿನಿ ಗ್ರಾಮದಿಂದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಇಬ್ಬರು ಯುವಕರ ಪರಿಚಯವಾಗಿದ್ದು, ಬೇಕರಿ ತಿನಿಸಿನಲ್ಲಿ ಮತ್ತು ಬರಿಸುವ ವಸ್ತು ಸೇರಿಸಿ ತಿನ್ನಲು ಕೊಟ್ಟಿದ್ದು, ಆಕೆ ಪ್ರಜ್ಞೆ ತಪ್ಪಿದಾಗ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 28ರಂದು ಮನನೊಂದ ವಿದ್ಯಾರ್ಥಿನಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ಆಕೆಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾಳೆ, ಆಸ್ಪತ್ರೆಯಲ್ಲಿದ್ದ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದ ವಿಡಿಯೋದಲ್ಲಿ ತನಗೆ ಆದ ಅನ್ಯಾಯ ಬೇರೆ ಯಾವುದೇ ಹೆಣ್ಣು ಮಕ್ಕಳಿಗೆ ಆಗಬಾರದು. ದಯಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ದುಷ್ಟರಿಗೂ ಇದು ಪಾಠವಾಗಬೇಕು ಎಂದು ಒತ್ತಾಯಿಸಿದ್ದಾಳೆ.