ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿ ಎಫ್ಐಆರ್ ದಾಖಲಿಸಲಾಗಿದೆ.
ಉದ್ಯಮಿ ಪ್ರದೀಪ್ ಅವರ ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಆರು ಜನರ ಹೆಸರನ್ನು ಉದ್ಯಮಿ ಪ್ರದೀಪ್ ಉಲ್ಲೇಖಿಸಿದ್ದರು. ಮಾಜಿ ಸಚಿವ ಅರವಿಂದ ಲಿಂಬಾವಳಿ, ಜಿ. ರಮೇಶ್ ರೆಡ್ಡಿ, ಕೆ. ಗೋಪಿ, ಜಯರಾಮರೆಡ್ಡಿ, ರಾಘವ ಭಟ್ ಮತ್ತು ಸೋಮಯ್ಯ ಅವರ ಹೆಸರನ್ನು ಉದ್ಯಮಿ ಪ್ರದೀಪ್ ಉಲ್ಲೇಖಿಸಿದ್ದರು.
ವ್ಯವಹಾರದಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಬಳಿಯ ಅಮಲಿಪುರ ನಿವಾಸಿ ಪ್ರದೀಪ್(47) ರಾಮನಗರ ತಾಲೂಕಿನ ನೆಟ್ಟಿಗೆರೆ ಬಳಿ ಕಾರ್ ನಲ್ಲಿ ತಲೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದೂವರೆ ಕೋಟಿ ರೂಪಾಯಿ ಹಣ ಪಡೆದು ರೆಸಾರ್ಟ್ ಗೆ ಪಾಲುದಾರನನ್ನಾಗಿ ಮಾಡಿಕೊಂಡಿದ್ದರು. ಆದರೆ, ಹಣ ಕೊಡದೇ ಮೋಸ ಮಾಡಿದ್ದಾರೆ. ರಾಜೀ ಸಂಧಾನ ಮಾಡುವ ಪ್ರಯತ್ನ ನಡೆಸಿದ ಅರವಿಂದ ಲಿಂಬಾವಳಿ ಸಹಾಯ ಮಾಡಿಲ್ಲವೆಂದು ಹೇಳಲಾಗಿದೆ.