ಬೆಂಗಳೂರು: ಎನ್ಪಿಎಸ್ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ದಯವಿಟ್ಟು ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದ್ದಾರೆ.
ಎನ್ಪಿಎಸ್ ಬಗ್ಗೆ ಬೆಳಗಾವಿ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಸರ್ಕಾರ ನಿಮ್ಮೆಲ್ಲರ ಪರವಾಗಿದೆ. ನಾನು ಸಹ ಸರ್ಕಾರಿ ನೌಕರನ ಪುತ್ರನಾಗಿದ್ದೇನೆ. ನಾನು ಕೂಡ ವೈಯಕ್ತಿಕವಾಗಿ ನಿಮ್ಮ ಜೊತೆಗೆ ಇದ್ದೇನೆ ಎಂದು ತಿಳಿಸಿದ್ದಾರೆ.
ಎನ್ಪಿಎಸ್ ಕೇಂದ್ರ ಮಟ್ಟದಲ್ಲಿ ಜಾರಿಗೆ ಬಂದಿದೆ. ಕೊರೋನಾ ಕಷ್ಟದಲ್ಲಿಯೂ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡೋಣ. ಮುಖ್ಯ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಸರ್ಕಾರಿ ನೌಕರರ ಯೋಗ ಕ್ಷೇಮ ವಿಚಾರಿಸುವುದು ನಮ್ಮ ಕರ್ತವ್ಯವಾಗಿದೆ. ದಯವಿಟ್ಟು ಮುಷ್ಕರ ಕೈ ಬಿಡಿ ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿರುವ ಸರ್ಕಾರಿ ನೌಕರರನ್ನು ಭೇಟಿ ಮಾಡಿದ ಅವರು ಮನವಿ ಮಾಡಿದ್ದಾರೆ.