ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಉತ್ತಮ ಆರೋಗ್ಯಕ್ಕಾಗಿ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಲೇಬೇಕು. ಆದರೆ ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ತೀವ್ರವಾದ ಬಾಯಾರಿಕೆಯನ್ನು ಅನುಭವಿಸುತ್ತೇವೆ. ಅದು ನಮ್ಮ ನಿದ್ರೆಗೆ ಭಂಗ ತರುತ್ತದೆ. ವಿಪರೀತವಾಗಿ ಬೆವರುವುದು, ಇದ್ದಕ್ಕಿದ್ದಂತೆ ಗಂಟಲು ಒಣಗುವುದು ಈ ರೀತಿಯ ಸಮಸ್ಯೆಗಳು ಕಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದನ್ನು ನಿರ್ಲಕ್ಷಿಸುವ ಬದಲು ಸಮಸ್ಯೆಯ ಕಾರಣ ಮತ್ತು ಪರಿಹಾರವನ್ನು ಕಂಡುಕೊಳ್ಳಬೇಕು.
ನೀರಿನ ಕೊರತೆ – ಆರೋಗ್ಯವಂತ ವಯಸ್ಕರು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ದಿನವಿಡೀ ಕಡಿಮೆ ನೀರನ್ನು ಸೇವಿಸಿದರೆ ರಾತ್ರಿ ದೇಹವು ನೀರಿನ ಕೊರತೆ ಅನುಭವಿಸುತ್ತದೆ. ರಾತ್ರಿ ದಿಢೀರನೆ ಗಂಟಲು ಒಣಗಿದಂತಾಗಲು ಇದೇ ಕಾರಣ.
ಚಹಾ ಮತ್ತು ಕಾಫಿ ಸೇವನೆ – ಭಾರತದಲ್ಲಿ ಚಹಾ ಮತ್ತು ಕಾಫಿ ಅತ್ಯಂತ ಜನಪ್ರಿಯ ಪಾನೀಯಗಳು. ಜನರ ಫೇವರಿಟ್ ಡ್ರಿಂಕ್‌ಗಳು ಇವು. ಆದರೆ ಇದು ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಈ ಪಾನೀಯಗಳು ಹೆಚ್ಚಿನ ಪ್ರಮಾಣದ ಕೆಫೀನ್ ಅನ್ನು ಒಳಗೊಂಡಿರುವುದರಿಂದ, ದೇಹದಲ್ಲಿನ ನೀರಿನ ಅಂಶವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೆಫೀನ್ ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ, ಇದು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ.
ಅತಿಯಾದ ಉಪ್ಪು ಸೇವನೆ – ಆರೋಗ್ಯವಾಗಿರಲು ದಿನಕ್ಕೆ 5 ಗ್ರಾಂ ಉಪ್ಪನ್ನು ಮಾತ್ರ ಸೇವಿಸಬೇಕು. ಇದಕ್ಕಿಂತ ಹೆಚ್ಚು ಸೇವಿಸಿದರೆ ಅದು ಖಂಡಿತವಾಗಿಯೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಪ್ಪು ಸೋಡಿಯಂ ಅನ್ನು ಹೊಂದಿರುತ್ತದೆ, ಇದು ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಡಿಹೈಡ್ರೇಶನ್‌ನಿಂದಾಗಿಯೇ ರಾತ್ರಿ ತೀವ್ರವಾದ ಬಾಯಾರಿಕೆಯಾಗುತ್ತದೆ.
ಮಧ್ಯರಾತ್ರಿ ಗಂಟಲು ಒಣಗಬಾರದು ಎಂದು ಬಯಸಿದರೆ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಚಹಾ-ಕಾಫಿ ಸೇವನೆ ಮಿತವಾಗಿರಲಿ. ಸೋಡಾ ಪಾನೀಯಗಳಲ್ಲಿ ಕೆಫೀನ್ ಇರುತ್ತದೆ, ಇದನ್ನು ಸಹ ತಪ್ಪಿಸಿ. ನಿಂಬೆ ನೀರು, ಮಜ್ಜಿಗೆ, ಹಣ್ಣಿನ ರಸದಂತಹ ದ್ರವ ಆಹಾರವನ್ನು ಸೇವಿಸಿ. ಫ್ರೆಂಚ್ ಫ್ರೈಸ್ ಮತ್ತು ಚಿಪ್ಸ್ ನಂತಹ ಕರಿದ ಪದಾರ್ಥಗಳನ್ನು ತಿನ್ನಬೇಡಿ. ಮಸಾಲೆಯುಕ್ತ ಆಹಾರಗಳು ಸಹ ಬಾಯಾರಿಕೆಯನ್ನು ಹೆಚ್ಚಿಸುತ್ತವೆ.