ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(ಕೆ.ಎಸ್.ಎಫ್.ಸಿ.) ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಅವಧಿ ಸಾಲಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುತ್ತಿದ್ದ ಬಡ್ಡಿ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆ.
ಉದ್ದಿಮೆ ಸ್ಥಾಪನೆಗಾಗಿ ಕೆ.ಎಸ್.ಎಫ್.ಸಿ. ಸಾಲ ಸೌಲಭ್ಯ ಒದಗಿಸುತ್ತಿದ್ದು, ಶೇ. 11ರಷ್ಟು ಬಡ್ಡಿ ದರ ವಿಧಿಸುತ್ತದೆ. ಇದರಲ್ಲಿ ಶೇಕಡ 4ರಷ್ಟು ಬಡ್ಡಿಯನ್ನು ಉದ್ದಿಮೆದಾರರು ಪಾವತಿಸಬೇಕಿದ್ದು, ಉಳಿದ ಶೇಕಡ 7ರಷ್ಟು ಬಡ್ಡಿ ಮೊತ್ತವನ್ನು ಸರ್ಕಾರ ನೇರವಾಗಿ ಕೆ.ಎಸ್.ಎಫ್.ಸಿ.ಗೆ ಭರಿಸುತ್ತದೆ. ಆದರೆ, ರಾಜ್ಯ ಸರ್ಕಾರದಿಂದ ಬಡ್ಡಿ ಸಬ್ಸಿಡಿ ಅನುದಾನ ಪಾವತಿಯಾಗದ ಹಿನ್ನೆಲೆಯಲ್ಲಿ ಕೆ.ಎಸ್.ಎಫ್.ಸಿ. ಸಾಲ ಪಡೆದ ಎಲ್ಲ ಎಸ್ಸಿ, ಎಸ್ಟಿ ಉದ್ಯಮಿದಾರರಿಗೆ ಪೂರ್ಣ ಬಡ್ಡಿ ಪಾವತಿ ಮಾಡಬೇಕೆಂದು ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದಾಗಿ 4-5 ಸಾವಿರ ಉದ್ದಿಮೆದಾರರು ಸುಸ್ತಿದಾರರಾಗುವ ಆತಂಕದಲ್ಲಿದ್ದಾರೆ.
ಸಾಮಾನ್ಯ ವರ್ಗದ ಮಹಿಳಾ ಉದ್ಯಮೆದಾರರಿಗೆ ಶೇಕಡ 4ರಷ್ಟು ಬಡ್ಡಿ ಸಬ್ಸಿಡಿ ನೀಡಲಾಗುತ್ತಿದ್ದು, ಇದನ್ನು ಕಡಿತ ಮಾಡದೇ ಮುಂದುವರೆಸಲಾಗಿದೆ. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆ ಎನ್ನಲಾಗಿದೆ. ಇದಕ್ಕೆ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಬಡ್ಡಿ ಸಬ್ಸಿಡಿ ನೀಡಲು ಪ್ರತಿ ವರ್ಷ ಬಜೆಟ್ ನಲ್ಲಿ 58 ಕೋಟಿ ರೂ. ಅನುದಾನ ಮೀಸಲಿಡಲಾಗುತ್ತದೆ. ಕಂತುಗಳಲ್ಲಿ ಕೆ.ಎಸ್.ಎಫ್.ಸಿ. ಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಉದ್ದಿಮೆದಾರರಿಗೆ ಪೂರ್ಣ ಬಡ್ಡಿ ಪಾವತಿಸಲು ನೀಡಿರುವ ನೋಟಿಸ್ ಹಿಂಪಡೆಯಲು ಸೂಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ.