ಬೆಂಗಳೂರು: ಅಕ್ಟೋಬರ್ 1ರಿಂದ ಮಾರ್ಗಸೂಚಿ ದರ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ನೂಕುನುಗ್ಗಲು ಉಂಟಾಗಿದೆ.
ಆಸ್ತಿ ನೋಂದಣಿಗೆ ಜನ ಮುಗಿಬಿದ್ದ ಕಾರಣ ಕಾವೇರಿ- 2 ಸರ್ವರ್ ಕ್ರ್ಯಾಶ್ ಆಗಿದೆ. ಮಾರುಕಟ್ಟೆ ದರಕ್ಕೆ ತಕ್ಕಂತೆ ಆಸ್ತಿ ಮಾರ್ಗಸೂಚಿ ದರ ಶೇಕಡ 25 ರಿಂದ 30ರಷ್ಟು ಹೆಚ್ಚಳವಾಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ಕ್ಕೆ ಮೊದಲೇ ಆಸ್ತಿ ನೋಂದಣಿಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾವೇರಿ -2 ತಂತ್ರಾಂಶ ಕುಸಿತವಾಗಿದ್ದು, ಸರ್ವರ್ ಸಮಸ್ಯೆಯಿಂದ ಶೇಕಡ 20ರಷ್ಟು ನೋಂದಣಿ ಮಾತ್ರ ಸಾಧ್ಯವಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಕ್ಟೋಬರ್ 1ರಿಂದ ಹಂತ ಹಂತವಾಗಿ ರಾಜ್ಯಾದ್ಯಂತ ಮಾರುಕಟ್ಟೆ ದರಕ್ಕೆ ತಕ್ಕಂತೆ ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಆದೇಶಿಸಿದೆ. ಪ್ರಸ್ತುತ ಇರುವ ಮಾರ್ಗಸೂಚಿ ದರದಲ್ಲಿ ಶೇಕಡ 25 ರಿಂದ 30ರಷ್ಟು ಹೆಚ್ಚಳವಾಗಲಿದ್ದು, ನೋಂದಣಿ ಶುಲ್ಕದಲ್ಲೂ ಏರಿಕೆಯಾಗಲಿದೆ. ಇದರಿಂದಾಗಿ ರಾಜ್ಯಾದ್ಯಂತ ಆಸ್ತಿ ನೋಂದಣಿಗಾಗಿ ಜನರು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಮುಗಿಬಿದ್ದಿದ್ದಾರೆ. ಏಕಾಏಕಿ ಆಸ್ತಿ ನೋಂದಣಿ ಪ್ರಮಾಣ ಹೆಚ್ಚಳವಾಗಿದ್ದರಿಂದ ಕಾವೇರಿ -2 ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡು ಆಸ್ತಿ ನೋಂದಣಿ ಪ್ರಕ್ರಿಯೆ ಅಸ್ತವ್ಯಸ್ತಗೊಂಡಿದೆ.