ಬೆಂಗಳೂರು: ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಸಂದರ್ಭದಲ್ಲಿ ಪಾವತಿಸಿದ್ದ ಹೆಚ್ಚುವರಿ ಶುಲ್ಕವನ್ನು ವಾಪಸ್ ಪಡೆಯದ 2022, 2023ನೇ ಸಾಲಿನ ಸಿಇಟಿ ಅಭ್ಯರ್ಥಿಗಳಿಗೆ ತಮ್ಮ ಹಣ ವಾಪಸ್ ಪಡೆದುಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊನೆಯ ಅವಕಾಶ ಕಲ್ಪಿಸಿದೆ.
ಇದುವರೆಗೆ ಹಣ ಮರುಪಾವತಿಯಾಗದ ಅಭ್ಯರ್ಥಿಗಳು ಏಪ್ರಿಲ್ 10ರೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://kea.kar.nic.in ಮೂಲಕ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಲ್ಲಿಸಬೇಕಿದೆ.
ಬ್ಯಾಂಕ್ ಖಾತೆಯ ಮಾಹಿತಿಯನ್ನು ಸರಿಯಾಗಿ ನಮೂದಿಸದೆ ಇರುವ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಇನ್ನು ಅನೇಕರು ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ನೀಡಿಲ್ಲ. ಅಂತಹ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ, ಪಾಸ್ವರ್ಡ್ ದಾಖಲಿಸಿ ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ಅಪ್ಲೋಡ್ ಮಾಡುವಂತೆ ತಿಳಿಸಲಾಗಿದೆ.