ಬೆಂಗಳೂರು: ರಾಜ್ಯದ ಎಲ್ಲಾ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳು ಸೇರಿದಂತೆ ಈ ವರ್ಷದ ಇಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕವನ್ನು ಶೇ. 10ರಷ್ಟು ಏರಿಕೆ ಮಾಡಲಾಗಿದೆ.
ರಾಜ್ಯದ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ, ಕಾಮೆಡ್ -ಕೆ ಕೋಟಾ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಸೀಟುಗಳ ಶುಲ್ಕವನ್ನು 2024- 25 ನೇ ಸಾಲಿನಲ್ಲಿ ಶೇಕಡ 10ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಶೇ. 45ರಷ್ಟಿದ್ದು, ಕಾಮೆಡ್ –ಕೆ ಕೋಟಾದ ಸೀಟುಗಳು ಶೇ. 30ರಷ್ಟು ಇವೆ. ಉಳಿದವು ಆಡಳಿತ ಮಂಡಳಿ ಹಾಗೂ ಎನ್ನ್.ಆರ್.ಐ. ಕೋಟಾ ಸೀಟುಗಳಾಗಿವೆ. ಇವುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಹಾಗೂ ಕಾಮೆಡ್- ಕೆ ಸೀಟುಗಳ ಶುಲ್ಕವನ್ನು ಶೇಕಡ 10ರಷ್ಟು ಹೆಚ್ಚಳ ಮಾಡಲಾಗಿದೆ.
ಸರ್ಕಾರಿ ಕೋಟಾದ ಟೈಪ್ -1, ಟೈಪ್ -2 ಪ್ರಸ್ತುತ ಶುಲ್ಕ 69,214 ರೂ.ನಿಂದ 76,135 ರೂ., 76,905 ರೂ.ನಿಂದ 84,595 ರೂ.ಗಳಿಗೆ ಹೆಚ್ಚಳವಾಗಲಿದೆ.
ಕಾಮೆಡ್ –ಕೆ ಕೋಟಾ ಪ್ರಸ್ತುತ 1. 69 ಲಕ್ಷ ರೂನಿಂದ 1.86 ಲಕ್ಷ ರೂ., 2.37 ಲಕ್ಷ ರೂ. ಇರುವ ಕಾಮೆಡ್ –ಕೆ ಕೋಟಾ ಸೀಟುಗಳ ಶುಲ್ಕ 2.64 ಲಕ್ಷ ರೂ.ಗಳಿಗೆ ಹೆಚ್ಚಳವಾಗಲಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ.