ಬೆಂಗಳೂರು: ಜುಲೈ 27ರ ಖಾಸಗಿ ಸಾರಿಗೆ ಒಕ್ಕೂಟದ ಬಂದ್ ವಾಪಸ್ ಪಡೆಯಲಾಗಿದೆ. ಜು. 27ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಬಹುದಾಗಿ ಒಕ್ಕೂಟ ಎಚ್ಚರಿಕೆ ನೀಡಿತ್ತು.
ಸಾರಿಗೆ ಸಚಿವರ ಭರವಸೆ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಮುಷ್ಕರ ಹಿಂಪಡೆದುಕೊಳ್ಳಲಾಗಿದೆ. ಖಾಸಗಿ ಸಂಘಟನೆಗಳ ಒಕ್ಕೂಟದ ಮುಖಂಡ ನಟರಾಜ ಶರ್ಮಾ ಹೇಳಿಕೆ ನೀಡಿದ್ದಾರೆ.
ನಮ್ಮ ಬೇಡಿಕೆ ಈಡೇರಿಸಲು ಆಗಸ್ಟ್ 10ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿದೆ. ಸರ್ಕಾರ ಕೈಗೊಳ್ಳುವ ಕ್ರಮ ಆಧರಿಸಿ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದು ನಟರಾಜ ಶರ್ಮಾ ಹೇಳಿದ್ದಾರೆ.
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 27ರಂದು ಖಾಸಗಿ ಸಾರ್ವಜನಿಕ ಸಾರಿಗೆ ವಾಹನ ಮುಷ್ಕರ ನಡೆಸಲು ಉದ್ದೇಶಿಸಿದ್ದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿಯಲ್ಲೇ ನಡೆದ ಸಭೆಯಲ್ಲಿ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರು, ಚಾಲಕರು ಸೇರಿದಂತೆ ಒಟ್ಟಾರೆ 35 ಸಂಘಟನೆಗಳಿಗೆ ಆಹ್ವಾನ ನೀಡಲಾಗಿತ್ತು. ಇಲಾಖೆಯ ಅಧಿಕಾರಿಗಳು ಕೂಡ ಭಾಗವಹಿಸಿದ್ದರು.
ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಗಳ ಚಾಲಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಮಾಸಿಕ 10,000 ರೂ. ಸಹಾಯಧನ ನೀಡಬೇಕು, ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆ ವಿಸ್ತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿತ್ತು.