ಲಖನೌ: ಇತ್ತೀಚೆಗೆ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬೀದಿ ನಾಯಿಯೊಂದು ಆಸ್ಪತ್ರೆಗೆ ನುಗ್ಗಿ ರೋಗಿಗಳಿಗೆ ಇಟ್ಟಿದ್ದ ಆಹಾರವನ್ನು ತಿನ್ನುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿಗಳ ಸುಳಿವಿಲ್ಲ.
ಉತ್ತರ ಪ್ರದೇಶದ ಮೊರಾದಾಬಾದ್ ನ ಸರ್ಕಾರಿ ಅಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ರೋಗಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಈ ವೇಳೆ ಆಸ್ಪತ್ರೆಗೆ ನುಗ್ಗಿದ ಬೀದಿ ನಾಯಿಯೊಂದು ರೋಗಿಯ ಪಕ್ಕದಲ್ಲಿಟ್ಟಿದ್ದ ಅಹಾರವನ್ನು, ಹಾಲನ್ನು ಕುಡಿದಿದೆ. ಇಷ್ಟಾದರೂ ಆಸ್ಪತ್ರೆಯ ವೈದ್ಯರಾಗಲಿ, ವೈದ್ಯಕೀಯ ಸಿಬ್ಬಂದಿಯಾಗಲಿ ಇತ್ತ ಸುಳಿದಿಲ್ಲ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ, ಸಿಸಿಟಿವಿ ಕ್ಯಾಮರಾ, ತಂತ್ರಜ್ಞಾನದ ವ್ಯವಸ್ಥೆಗಳಿದ್ದರೂ ಬೀದಿ ನಾಯಿಯೊಂದು ಆಸ್ಪತ್ರೆಗೆ ನುಗ್ಗಿ ರೋಗಿಗಳ ಆಹಾರವನ್ನು ತಿಂದರೂ ಏನೂ ಮಾಡಲು ಸಾಧ್ಯವಾಗದಿರುವುದು ವಿಪರ್ಯಾಸ.
ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮೊರಾದಾಬಾದ್ ನ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಕುಲದೀಪ್ ಸಿಂಗ್ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕೋತಿಯೊಂದು ನುಗ್ಗಿತ್ತು. ಕೋತಿಯನ್ನು ಆಸ್ಪತ್ರೆಯಿಂದ ಹೊರಹಾಕಲು ಆಸ್ಪತ್ರೆ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು.