ಆಲೂಗಡ್ಡೆ ಮನೆಯಲ್ಲಿ ಎಲ್ಲರಿಗೂ ಬಲು ಇಷ್ಟವೇ. ಆದರೆ ಅದನ್ನು ದೀರ್ಘ ಕಾಲದ ತನಕ ಸಂಗ್ರಹಿಸಿಡುವುದು ಹೇಗೆಂದು ತಿಳಿದಿಲ್ಲ ಎನ್ನುತ್ತೀರಾ. ನಿಮ್ಮ ಸಮಸ್ಯೆ ಪರಿಹರಿಸುವುದು ಈಗ ಬಲು ಸುಲಭ.
ಆಲೂಗಡ್ಡೆಯನ್ನು ಸಾಧ್ಯವಾದಷ್ಟು ಬಿಸಿಲು ಬೀಳದ ತಣ್ಣಗಿನ ಜಾಗದಲ್ಲಿ ಸಂಗ್ರಹಿಸಿಡಿ. ಅಲೂಗಡ್ಡೆ ಸಂಗ್ರಹಿಸಿಡುವ ಕವರ್ ಅನ್ನು ಅಲ್ಲಲ್ಲಿ ತೂತು ಮಾಡಿ. ಮೇಲ್ಭಾಗಕ್ಕೆ ಕಾಟನ್ ಟವೆಲ್ ಹಾಕಿಡಿ.
ಬಿಸಿಯಾದ ಜಾಗದಲ್ಲಿ ಇದನ್ನು ಇಡದಿರಿ. ಅದೇ ರೀತಿ ಹೆಚ್ಚು ತೇವಾಂಶವಿರುವ ಸಿಂಕ್ ಕೆಳಭಾಗದಲ್ಲಿ ಇಡುವುದು ಕೂಡಾ ಒಳ್ಳೆಯದಲ್ಲ. ಇದರಿಂದ ಆಲೂಗಡ್ಡೆ ಮೊಳಕೆಯೊಡೆದೀತು.
ಆಲೂಗಡ್ಡೆ ಬೇಯಿಸುವ ಮುನ್ನ ಮಾತ್ರ ತೊಳೆಯಿರಿ. ಮೊದಲೇ ತೊಳೆದಿಟ್ಟರೆ, ಅಂದರೆ ಅಂಗಡಿಯಿಂದ ಕೊಂಡು ತಂದ ತಕ್ಷಣ ತೊಳೆದರೆ ಬಳಸುವ ವೇಳೆ ಹಾಳಾಗುವ, ಕೊಳೆಯುವ ಸಾಧ್ಯತೆಯೇ ಹೆಚ್ಚು.
ಸ್ಟಾರ್ಚ್ ಅಂಶ ಹೆಚ್ಚಿರುವ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದು ಗ್ಲುಕೋಸ್ ಅಗಿ ಬದಲಾಗುತ್ತದೆ. ಹಾಗಾಗಿ ಕೆಲವು ನಿರ್ದಿಷ್ಟ ತಿನಿಸುಗಳ ತಯಾರಿ ವೇಳೆ ಮಾತ್ರ ಫ್ರಿಜ್ ನಲ್ಲಿಡಿ. ಇಲ್ಲವಾದರೆ ಹೊರಗಿಡುವುದೇ ಒಳ್ಳೆಯದು.