ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ವಿಧಾನ ಪರಿಷತ್ ಚುನಾವಣೆಯಲ್ಲೂ ಇದನ್ನು ಮುಂದುವರೆಸಿದ್ದು, ಆರು ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ಒಂದು ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿತ್ತು.
ಆದರೆ ತನಗೆ ಎರಡು ಕ್ಷೇತ್ರ ಬಿಟ್ಟು ಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದ್ದು, ಹೀಗಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದ ಜೊತೆಗೆ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನೂ ಜೆಡಿಎಸ್ ಗೆ ಬಿಟ್ಟುಕೊಡಲು ನಿರ್ಧರಿಸಿದ ಬಿಜೆಪಿ ನಾಯಕರು ತಾನು ಈಗಾಗಲೇ ಈ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದ್ದ ನಿಂಗರಾಜು ಅವರ ಹೆಸರನ್ನು ಹಿಂಪಡೆದಿತ್ತು.
ಆದರೆ ತಮ್ಮ ಹೆಸರು ಈಗಾಗಲೇ ಘೋಷಣೆಯಾಗಿದ್ದ ಕಾರಣ ಬಿ ಫಾರಂ ನಿರೀಕ್ಷೆಯಲ್ಲಿದ್ದ ನಿಂಗರಾಜು ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ವಿವೇಕಾನಂದ ಅವರೂ ಸಹ ನಾಮಪತ್ರ ಸಲ್ಲಿಸಿದ್ದು ಹೀಗಾಗಿ ಗೊಂದಲ ಮುಂದುವರೆದಿದೆ.