ಮೈಸೂರು: ಸೌಜನ್ಯಾ ಕೊಲೆ ಪ್ರಕರಣ ಮುಗಿದ ಅಧ್ಯಾಯ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸಂಚಾಲಕ ಸ್ಟ್ಯಾನ್ಲಿ ಕಿಡಿಕಾರಿದ್ದಾರೆ.
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಆಯೋಜಿಸಿದ್ದ ಸೌಜನ್ಯ ಪ್ರಕರಣ -ಮುಂದಿನ ಹೆಜ್ಜೆಗಳು ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸೌಜನ್ಯಾ ಅವರಂತಹವರಿಗೆ ನ್ಯಾಯ ಕೊಡಿಸಲು ಜನರು ಮತ ನೀಡಿದ್ದಾರೆ. ಪ್ರಕರಣದ ಬಗ್ಗೆ ಗೊತ್ತಿಲ್ಲದಿದ್ದರೆ ತಜ್ಞರನ್ನು ಕೇಳಿ ತಿಳಿದುಕೊಳ್ಳಲಿ. ಗೃಹ ಸಚಿವರು ಸೌಜನ್ಯಾ ಕೊಲೆ ಪ್ರಕರಣ ಮುಗಿದು ಹೋದ ಅಧ್ಯಾಯವೆಂದು ಹೇಳಿಕೆ ನೀಡಿರುವುದು ಬಾಲಿಶವಾಗಿದೆ ಎಂದು ತಿಳಿಸಿದ್ದಾರೆ.
ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಯುತ್ತಿದ್ದು, ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ಹೋರಾಟಗಾರರಲ್ಲಿ ಆಶಾಭಾವನೆ ತಂದಿದೆ ಎಂದು ಹೇಳಿದ ಅವರು, ಸೌಜನ್ಯಾ ಪರವಾಗಿ ನ್ಯಾಯಕ್ಕಾಗಿ ಜನ ಹೋರಾಟ ನಡೆಸುತ್ತಿದ್ದಾರೆ. ಜನರ ಭಾವನೆ ಪರಿಗಣಿಸಿ ಮರು ತನಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮಾನವ ಹಕ್ಕು ಆಯೋಗಕ್ಕೆ ಒಡನಾಡಿ ಸಂಸ್ಥೆಯಿಂದ ಪತ್ರ ಬರೆಯಲಾಗಿದ್ದು, ಅದು ಕೂಡ ಪ್ರಕರಣ ದಾಖಲಿಸಿಕೊಂಡಿದೆ. ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅಡ್ವೊಕೇಟ್ ಜನರಲ್ ಅವರ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.