ಬೆಂಗಳೂರು: ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಪಡಿಸುವಂತೆ ಹೈಕೋರ್ಟ್ ಸಲಹೆ ನೀಡಿದೆ. ಮಕ್ಕಳು ಮೊಬೈಲ್ ದಾಸರಾಗದಂತೆ ಮಾಡಲು ಇದು ಅಗತ್ಯವಾಗಿದೆ. ಸರ್ಕಾರ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಶಾಲೆಗೆ ಹೋಗುವ ಮಕ್ಕಳು ಕೂಡ ಸಾಮಾಜಿಕ ಮಾಧ್ಯಮಗಳ ದಾಸರಾಗುತ್ತಿದ್ದಾರೆ. ಮತದಾನಕ್ಕೆ 21 ವರ್ಷ ನಿಗದಿ ಮಾಡಿದ ಮಾದರಿಯಲ್ಲೇ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಗೆ ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸಲಹೆ ನೀಡಿದೆ.
ವೈಯಕ್ತಿಕ ಖಾತೆ ನಿರ್ಬಂಧಿಸಿ 2021 ಮತ್ತು 2022ರ ಅವಧಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಿದ ತಕರಾರು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್ ಸಂಸ್ಥೆ(ಟ್ವಿಟರ್) ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠದ ಈ ಸಲಹೆ ನೀಡಿದೆ.
ಶಾಲೆಗೆ ಹೋಗುವ ಮಕ್ಕಳು ಕೂಡ ಸಾಮಾಜಿಕ ಮಾಧ್ಯಮಗಳ ದಾಸರಾಗಿದ್ದಾರೆ. ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಒಳ್ಳೆಯದಾಗುತ್ತದೆ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್. ಕುಮಾರ್ ಅವರು ಕೆಲವು ಆನ್ಲೈನ್ ಗೇಲ್ ಆಡಲು ಕಾನೂನಿನ ಪ್ರಕಾರ ಆಧಾರ್ ಮತ್ತು ಇತರೆ ದಾಖಲೆ ಸಲ್ಲಿಸಬೇಕಿದೆ ಎಂದು ತಿಳಿಸಿದ್ದು, ಹಾಗಾದರೆ ಆ ರೀತಿ ಕ್ರಮಗಳನ್ನು ಜಾಲತಾಣ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ ಎಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಪ್ರಶ್ನಿಸಿದೆ.
ಮತದಾನಕ್ಕೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಿರುವಂತೆ ಜಾಲತಾಣ ಬಳಕೆಗೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸುವುದು ಒಳ್ಳೆಯದು. ಈಗಂತೂ ಎಲ್ಲದಕ್ಕೂ ಜಾಲತಾಣ ಬಳಕೆ ಮಾಡುವವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 17 ಅಥವಾ 18 ವರ್ಷದ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ಈ ಕುರಿತು ಚಿಂತನೆ ನಡೆಸುವಂತೆ ಕೇಂದ್ರಕ್ಕೆ ಮೌಖಿಕ ಸಲಹೆ ನೀಡಿದೆ.