ಬ್ರೆಸಿಲಿಯಾ: ಖ್ಯಾತ ಗಾಯಕ ಪೆಡ್ರೊ ಹೆನ್ರಿಕ್ ವೇದಿಕೆ ಮೇಲೆ ಹಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಲೈವ್ ಕಾರ್ಯಕ್ರಮದಲ್ಲಿಯೇ ಗಾಯಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವುದು ಕಂಡು ಅಭಿಮಾನಿಗಳು ಕಂಗಾಲಾಗಿದ್ದಾರೆ.
ಬ್ರೆಜಿಲ್ ನಲ್ಲಿ ಡಿ.14ರಂದು 30 ವರ್ಷದ ಗಾಸ್ಪೆಲ್ ಗಾಯಕ ಪೆಡ್ರೊ ಧಾರ್ಮಿಕ ಕಾರ್ಯಕರ್ಮದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಹಾಡು ಹಾಡುತ್ತಾ, ಸಭಿಕರೊಂದಿಗೆ ಸಂವಾದ ಮಾಡುತ್ತಾ ಇದ್ದಾಗಲೇ ವೇದಿಕೆ ಮೇಲೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಅಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಪೆಡ್ರೋ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಪೆಡ್ರೋ ವಿಧಿವಶರಾಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕಾರ್ಯಕ್ರಮಕ್ಕೂ ಮೊದಲೇ ಪೆಡ್ರೊ ತುಂಬಾ ದಣಿದಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ನೇಹಿತರ ಬಳಿ ಹೇಳಿದ್ದರಂತೆ ಆದರೆ ನೆರೆದಿರುವ ಸಭಿಕರಿಗೆ ಬೇಸರವಾಗಬಾರದು ಎಂದು ಕಾರ್ಯಕ್ರಮದಲ್ಲಿ ಹಾಡಲು ಮುಂದಾಗಿದ್ದಾರೆ. ಆದರೆ ಹಾಡುತ್ತ ರಂಜಿಸುತ್ತಿದ್ದ ಕೆಲ ಹೊತ್ತಲ್ಲೇ ಪೆಡ್ರೊ ಹೆನ್ರಿಕ್ ದುರಂತ ಕಂಡಿದ್ದಾರೆ.
ಪೆಡ್ರೊ ಮೂರು ವರ್ಷದವರಿರುವಾಗಲೇ ಹಾಡಲಾರಂಭಿಸಿದ್ದರು. ಕ್ರಮೇಣ ಜನಪ್ರಿಯತೆ ಪಡೆದುಕೊಂಡಿದ್ದರು. ಗಾಯಕ ಪೆಡ್ರೊಗೆ 2 ತಿಂಗಳ ಮಗುವಿದೆ. ಪತ್ನಿ ಸುಯಿಲಾ, 2 ತಿಂಗಳ ಮಗುವನ್ನು ಗಾಯಕ ಅಗಲಿದ್ದಾರೆ.